ಕ್ರಾಂತಿಕಾರಿ ಹೋರಾಟಗಾರರ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ: ವಿಜಯ ಕೊಡವೂರು

ಉಡುಪಿ: ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಮತ್ತು ಉಡುಪಿ ಚಾನೆಲ್ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಯಿತು.

8, 9, 10ನೇ ತರಗತಿ ಮಕ್ಕಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಚಂದ್ರಶೇಖರ್ ಅಜಾದ್ ವಿಷಯದಲ್ಲಿ ಹಾಗೂ ಪಿಯುಸಿ-ಪದವಿ ವಿದ್ಯಾರ್ಥಿಗಳಿಗೆ ವೀರ ಸಾವರ್ಕರ್ ಮತ್ತು ಡಾ. ಹೆಡ್ಗೆವಾರ್ ಜೀವನ ಚರಿತ್ರೆಯ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು ಸಹಿತ ವಿವಿಧ ಕಡೆಗಳ ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕೊಡವೂರು ವಾರ್ಡ್ ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ, ಶಾಲೆಗಳಲ್ಲಿ ಕೆಲವೊಂದು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತ್ರ ವಿವರಿಸುತ್ತಾರೆ. ಆದರೆ ಅದೆಷ್ಟೋ ಕ್ರಾಂತಿಕಾರಿ ಹೋರಾಟಗಾರರ ಬಗ್ಗೆ ನಮಗೆ ತಿಳಿದೇ ಇಲ್ಲ. ಇವರ ಬಗ್ಗೆ ಎಲ್ಲಿಯೂ ವಿವರಿಸುವುದು ಕೂಡ ಇಲ್ಲ. ಇಂತಹ ಕ್ರಾಂತಿಕಾರಿ ಹೋರಾಟಗಾರರ ಜೀವನ ಚರಿತ್ರೆಯನ್ನು ಮಕ್ಕಳು ತಿಳಿದುಕೊಳ್ಳಬೇಕು. ಅವರನ್ನು ಜೀವನ ಪೂರ್ತಿ ಅನುಸರಿಸಬೇಕು ಎನ್ನುವ ದೃಷ್ಟಿಯಿಂದ ಇಂತಹ ವಿಶೇಷ ರೀತಿಯ ಭಾಷಣ ಸ್ಪರ್ಧೆಯನ್ನು ಕೊಡವೂರು ವಾರ್ಡಿನ ನಾಗರಿಕರ ಸಹಕಾರ ಮತ್ತು ಎಲ್ಲಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಏರ್ಪಡಿಸಲು ಸಾಧ್ಯವಾಯಿತು ಎಂದರು.

ಜಿಲ್ಲೆಯಾದ್ಯಂತ 63 ಮಕ್ಕಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇನ್ನು ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ವಿಶೇಷ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಯೋಧ ಪ್ರಶಾಂತ್ ಸೂರಲ್, ಕೊಡವೂರು ಶಾಲೆಯ ಶಿಕ್ಷಕಿ ಮಲ್ಲಿಕಾ ದೇವಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳಿಸಿದ ಸಾತ್ವಿಕ್ ಪದ್ಮನಾಭ ಭಟ್ ಹಾಗೂ 623 ಅಂಕ ಪಡೆದ ಜೇರೂಹಮ್ ಲಾಯ್ಡ್ ಮಾಬೇನ್ ಅವರನ್ನು ಗೌರವಿಸಲಾಯಿತು.

ವಾಗ್ಮಿ ಅಕ್ಷಯ ಗೋಖಲೆ, ತುಳು ಹಾಸ್ಯ ನಟ ಪ್ರಸನ್ನ ಶೆಟ್ಟಿ ಬೈಲೂರು, ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ್ ಬಲ್ಲಾಳ್, ಪತ್ರಕರ್ತ ಜನಾರ್ಧನ್ ಭಟ್ ಕೊಡವೂರು, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾತ್ ಕೊಡವೂರು, ನಾರಾಯಣ ಗುರು ಶಾಲೆಯ ಕಮಿಟಿ ಅಧ್ಯಾಪಕ ರಘುರಾಮ್ ಸುವರ್ಣ, ಮತ್ಸ್ಯ ಉದ್ಯಮಿ ಸಾಧು ಸಾಲ್ಯಾನ್, ಸಂಚಾಲಕರಾದ ಅಶೋಕ್ ಶೆಟ್ಟಿಗಾರ್ ಮತ್ತು ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.