ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ ಖಚಿತ: ಕೊಡವೂರು

ಉಡುಪಿ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸುವ ಮೂಲಕ ಪಕ್ಷದ ಹಿಂದಿನ ಗತವೈಭವನ್ನು ಮರುಕಳಿಸಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಹೇಳಿದ್ದಾರೆ.

ತಳಮಟ್ಟದ ಕಾರ್ಯಕರ್ತರನ್ನು ಸಂಘನಾತ್ಮಕವಾಗಿ ಒಗ್ಗೂಡಿಸಿ ಜನರಿಗೆ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ನೀಡಿದ ಸೌಲಭ್ಯಗಳ ಅರಿವು ಮೂಡಿಸುವ ಪ್ರಯತ್ನ ಸಾಗಿದೆ. ಕಾಂಗ್ರೆಸ್ ನೇತೃತ್ವದ ಸಿದ್ಧರಾಮಯ್ಯ ಸರಕಾರದ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಬಿ.ಪಿ.ಎಲ್. ಪಡಿತರ ಚೀಟಿ, ರಸ್ತೆ ಅಗಲೀಕರಣ, ಸಂಪರ್ಕ ಸೇತುವೆ, ಕುಡಿಯುವ ನೀರಿನ ಸೌಲಭ್ಯ, ರೈತರಿಗೆ ಅನುಕೂಲವಾಗುವಂತೆ ಕಿಂಡಿ ಅಣೆಕಟ್ಟು, ಕೃಷಿ ಪಂಪ್‍ಸೆಟ್‍ಗಳಿಗೆ ನಿರಂತರ ವಿದ್ಯುತ್ ಸರಬರಾಜು, ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ, ಪಂಚಾಯತ್‍ರಾಜ್ ವ್ಯವಸ್ಥೆಗೆ ಹೆಚ್ಚಿನ ಒತ್ತು ಹಾಗೂ ಹಲವಾರು ಭಾಗ್ಯಗಳನ್ನು ನೀಡುವುದರ ಮೂಲಕ ಸರಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಿದೆ. ಹಾಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಜಯಗೊಳಿಸುವುದರ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಜನತೆ ಬೆಂಬಲ ನೀಡಲಿದ್ದಾರೆ ಎಂದರು.

ಬಿಜೆಪಿ ಸರಕಾರ ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ. ಪೆಟ್ರೋಲ್ ಡೀಸೆಲ್ ಬೆಲೆಗಳು ನಿರಂತರ ಏರುಗತಿಯತ್ತ ಸಾಗುತ್ತಿವೆ. ಸರಕಾರಿ ಸೌಮ್ಯದ ಸಂಸ್ಥೆಗಳು ಮಾರಾಟ ಮಾಡಲಾಗುತ್ತಿದೆ. ಅಭಿವೃದ್ಧಿಯು ಕುಂಠಿತಗೊಂಡು ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಬಿಜೆಪಿಯ ಅಚ್ಚೆದಿನ್ ಜನತೆಗೆ ಗಗನ ಕುಸುಮವಾಗಿಯೇ ಉಳಿದಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆಗೊಳಿಸುವ ಮೂಲಕ ಜನತೆ ಬೆಂಬಲ ನೀಡಬೇಕೆಂದು ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.