ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘ ಸಾಧನೆ: ಸತತ 12ನೇ ಬಾರಿ ಸಾಧನ ಪ್ರಶಸ್ತಿ.

ಮಲ್ಪೆ: ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘವು 2024-25 ಸಾಲಿನಲ್ಲಿ ಶೇ.100 ಸಾಲ ವಸೂಲಾತಿ ಮಾಡಿದ ಸಾಧನೆಗೆ ಸತತ 12ನೇ ಬಾರಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸಾಧನಾ ಪ್ರಶಸ್ತಿ ದೊರಕಿದೆ.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮಹಾಸಭೆಯಲ್ಲಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರು ಸಂಘದ ಅಧ್ಯಕ್ಷ ಕೆ. ನಾರಾಯಣ ಬಲ್ಲಾಳ್ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಧಾಕರ ಜತ್ತನ್ ಅವರಿಗೆ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಸಂಘವು ಉಡುಪಿ ಜಿಲ್ಲೆಯಲ್ಲಿ ಸತತವಾಗಿ 12ನೇ ಬಾರಿ ಶೇ. 100 ಸಾಲ ವಸೂಲಾತಿಯ ಸಾಧನೆ ಮಾಡಿದ ಏಕೈಕ ಸಂಸ್ಥೆಯಾಗಿದೆ.

ಜಿಲ್ಲಾ ಬ್ಯಾಂಕ್‌ನ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಬಿ.ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್ ಪಾಂಗಳ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ. ಆರ್., ಬ್ಯಾಂಕ್‌ನ ಉಡುಪಿ ವಲಯ ಮೇಲ್ವಿಚಾರಕರು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.