ಭಾರತೀಯ ರೈಲಿನಲ್ಲಿ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಪ್ರಯಾಣಿಕರ ಸುರಕ್ಷತೆ, ಶಿಸ್ತು ಮತ್ತು ರೈಲ್ವೆ ಆಸ್ತಿಯ ರಕ್ಷಣೆಗೆ ಹಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಕಟ್ಟಬೇಕಾಗಬಹುದು. ವಿಶೇಷವಾಗಿ ಕೆಲವು ತಪ್ಪುಗಳಿಗೆ ಸಾವಿರಾರು ರೂಪಾಯಿ ದಂಡ ವಿಧಿಸುವ ಅವಕಾಶವಿದೆ.
ಜನ್ ವಿಶ್ವಾಸ್ (ತಿದ್ದುಪಡಿ ನಿಬಂಧನೆಗಳು) ಕಾಯ್ದೆ, 2026ರ ಅಡಿಯಲ್ಲಿ ರೈಲ್ವೆ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, 2026ರ ಜೂನ್ 19ರಿಂದ ಅವು ಜಾರಿಗೆ ಬಂದಿವೆ. ಪ್ರಯಾಣಿಕರಿಗೆ ನಿಯಮಗಳ ಬಗ್ಗೆ ಅರಿವು ಮೂಡಿಸಲು ರೈಲ್ವೆ ಜಾಗೃತಿ ಅಭಿಯಾನವನ್ನೂ ನಡೆಸುತ್ತಿದೆ.
ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ದಂಡ
ರೈಲಿನಲ್ಲಿ ಪ್ರಯಾಣಿಸುವಾಗ ಮಾನ್ಯ ಟಿಕೆಟ್ ಹೊಂದಿರುವುದು ಕಡ್ಡಾಯ. ರೈಲ್ವೆ ಕಾಯ್ದೆಯ ಸೆಕ್ಷನ್ 137ರ ಪ್ರಕಾರ ಟಿಕೆಟ್ ಇಲ್ಲದೆ ಅಥವಾ ಮೋಸದ ರೀತಿಯಲ್ಲಿ ಪ್ರಯಾಣಿಸುವುದು ಅಪರಾಧ. ಇಂತಹ ಸಂದರ್ಭದಲ್ಲಿ ಮೂಲ ಪ್ರಯಾಣ ದರದ ಜೊತೆಗೆ ಕನಿಷ್ಠ ₹500 ಹೆಚ್ಚುವರಿ ಶುಲ್ಕ ವಿಧಿಸಬಹುದು.
ಟಿಕೆಟ್ನಲ್ಲಿ ಅನುಮತಿಸಿರುವ ದೂರಕ್ಕಿಂತ ಹೆಚ್ಚು ಪ್ರಯಾಣಿಸಿದರೂ ಸೆಕ್ಷನ್ 138ರ ಅಡಿಯಲ್ಲಿ ಹೆಚ್ಚುವರಿ ಶುಲ್ಕ ವಿಧಿಸಬಹುದು. ಇನ್ನೊಬ್ಬರ ಹೆಸರಿನಲ್ಲಿ ನೀಡಲಾದ ಟಿಕೆಟ್ ಬಳಸಿ ಪ್ರಯಾಣಿಸುವುದಕ್ಕೂ ನಿಯಮಗಳಿವೆ. ಸೆಕ್ಷನ್ 142ರ ಅಡಿಯಲ್ಲಿ ಇಂತಹ ಟಿಕೆಟ್ ವರ್ಗಾವಣೆ ನಿಯಮ ಉಲ್ಲಂಘನೆಯಾಗಬಹುದು.
ರೈಲು ನಿಲ್ದಾಣದಲ್ಲೂ ನಿಯಮ ಪಾಲಿಸಬೇಕು
ರೈಲು ನಿಲ್ದಾಣ ಸಾರ್ವಜನಿಕ ಸ್ಥಳವಾಗಿರುವುದರಿಂದ ಅಲ್ಲಿಯೂ ಕೆಲವು ನಿಯಮಗಳನ್ನು ಪಾಲಿಸಬೇಕು. ಸರಿಯಾದ ಪರವಾನಗಿ ಇಲ್ಲದೆ ವಸ್ತುಗಳು ಅಥವಾ ಸೇವೆಗಳನ್ನು ಮಾರಾಟ ಮಾಡುವುದು, ಭಿಕ್ಷೆ ಬೇಡುವುದು ಅಥವಾ ಇತರರಿಗೆ ತೊಂದರೆ ಉಂಟುಮಾಡುವ ಚಟುವಟಿಕೆಗಳಲ್ಲಿ ತೊಡಗುವುದು ಕಾನೂನುಬಾಹಿರವಾಗಬಹುದು.
ರೈಲಿನಲ್ಲಿ ಅಥವಾ ನಿಲ್ದಾಣದಲ್ಲಿ ಮದ್ಯಪಾನ ಮಾಡಿ ಇತರ ಪ್ರಯಾಣಿಕರಿಗೆ ತೊಂದರೆ ನೀಡುವುದು, ಅಸಭ್ಯವಾಗಿ ವರ್ತಿಸುವುದು ಅಥವಾ ಅಶಿಸ್ತಿನ ವರ್ತನೆ ತೋರಿಸುವುದಕ್ಕೂ ದಂಡ ವಿಧಿಸಬಹುದು. ಕೆಲವು ಸಂದರ್ಭಗಳಲ್ಲಿ ₹1,000ವರೆಗೆ ದಂಡ ಅಥವಾ ಸಮುದಾಯ ಸೇವೆ ವಿಧಿಸುವ ಅವಕಾಶವಿದೆ.
ಕಾಯ್ದಿರಿಸಿದ ಸೀಟಿಗೆ ಸಂಬಂಧಿಸಿದ ನಿಯಮ
ಕಾಯ್ದಿರಿಸಿದ ಬೋಗಿಗೆ ಸರಿಯಾದ ಅನುಮತಿಯಿಲ್ಲದೆ ಪ್ರವೇಶಿಸುವುದು ಅಪರಾಧವಾಗಬಹುದು. ಇಂತಹ ಉಲ್ಲಂಘನೆಗೆ ₹2,000ವರೆಗೆ ದಂಡ ವಿಧಿಸಬಹುದು.
ಅದೇ ರೀತಿ, ಮತ್ತೊಬ್ಬ ಪ್ರಯಾಣಿಕರಿಗೆ ಮೀಸಲಾಗಿರುವ ಸೀಟ್ ಅಥವಾ ಬರ್ತ್ ಅನ್ನು ಖಾಲಿ ಮಾಡಲು ನಿರಾಕರಿಸಿದರೆ ₹1,000ವರೆಗೆ ದಂಡ ವಿಧಿಸುವ ಅವಕಾಶವಿದೆ.
ಮಹಿಳೆಯರಿಗೆ ಮೀಸಲಾದ ಬೋಗಿ ಅಥವಾ ಪ್ರದೇಶಕ್ಕೆ ಅನಧಿಕೃತವಾಗಿ ಪ್ರವೇಶಿಸುವ ಪುರುಷ ಪ್ರಯಾಣಿಕರಿಗೆ ₹2,500ವರೆಗೆ ದಂಡ ವಿಧಿಸಬಹುದು.
ಅಪಾಯಕಾರಿ ವಸ್ತು ಸಾಗಿಸಿದರೆ ₹10,000 ದಂಡ!
ರೈಲಿನಲ್ಲಿ ಪ್ರಯಾಣಿಸುವಾಗ ಅಪಾಯಕಾರಿ ಅಥವಾ ಹಾನಿಕಾರಕ ವಸ್ತುಗಳನ್ನು ಸಾಗಿಸುವುದರಿಂದ ಪ್ರಯಾಣಿಕರ ಸುರಕ್ಷತೆ ಹಾಗೂ ರೈಲ್ವೆ ಕಾರ್ಯಾಚರಣೆಗೆ ಅಪಾಯ ಉಂಟಾಗಬಹುದು.
ರೈಲ್ವೆ ಕಾಯ್ದೆಯ ಸೆಕ್ಷನ್ 165ರ ಅಡಿಯಲ್ಲಿ ಇಂತಹ ಅಪಾಯಕಾರಿ ವಸ್ತುಗಳನ್ನು ಸಾಗಿಸಿದರೆ ಕನಿಷ್ಠ ₹10,000 ದಂಡ ವಿಧಿಸುವ ಅವಕಾಶವಿದೆ. ಹೀಗಾಗಿ ರೈಲಿಗೆ ಏರುವ ಮುನ್ನ ನಿಮ್ಮ ಬ್ಯಾಗ್ನಲ್ಲಿ ನಿಷೇಧಿತ ಅಥವಾ ಅಪಾಯಕಾರಿ ವಸ್ತುಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.
ರೈಲಿನಲ್ಲಿ ಧೂಮಪಾನ ಮಾಡಿದರೂ ದಂಡ
ರೈಲಿನಲ್ಲಿ ಧೂಮಪಾನ ಮಾಡುವುದಕ್ಕೂ ನಿಯಮಗಳಿವೆ. ಸೆಕ್ಷನ್ 167ರ ಅಡಿಯಲ್ಲಿ ರೈಲಿನಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ₹2,000ವರೆಗೆ ದಂಡ ವಿಧಿಸಬಹುದು.
ರೈಲ್ವೆ ಸಿಬ್ಬಂದಿ ನೀಡುವ ಸುರಕ್ಷತಾ ಸೂಚನೆಗಳನ್ನು ಪಾಲಿಸದಿದ್ದರೂ ದಂಡ ವಿಧಿಸುವ ಅವಕಾಶವಿದೆ. ರೈಲ್ವೆ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ₹2,500ವರೆಗೆ ದಂಡ ವಿಧಿಸಬಹುದು.
ರೈಲ್ವೆ ಆಸ್ತಿಗೆ ಹಾನಿ ಮಾಡಬೇಡಿ
ರೈಲು ನಿಲ್ದಾಣ ಅಥವಾ ರೈಲಿನಲ್ಲಿ ಅಳವಡಿಸಿರುವ ಸೂಚನಾ ಫಲಕಗಳು, ಅಧಿಕೃತ ಪ್ರದರ್ಶನಗಳು ಅಥವಾ ಇತರ ರೈಲ್ವೆ ಆಸ್ತಿಗಳನ್ನು ಹಾನಿಗೊಳಿಸುವುದು ಅಪರಾಧ. ಮೊದಲ ಬಾರಿಗೆ ಇಂತಹ ಕೃತ್ಯ ಎಸಗಿದರೆ ₹2,000ವರೆಗೆ ದಂಡ ವಿಧಿಸಬಹುದು.
ಅನಧಿಕೃತವಾಗಿ ರೈಲ್ವೆ ಆವರಣ ಪ್ರವೇಶಿಸುವುದು, ಫುಟ್ಬೋರ್ಡ್ನಲ್ಲಿ ಪ್ರಯಾಣಿಸುವುದು, ಕಸ ಹಾಕುವುದು, ಅಲಾರಾಂ ಸರಪಳಿಯನ್ನು ಅನಗತ್ಯವಾಗಿ ಎಳೆಯುವುದು ಮುಂತಾದವುಗಳಿಗೂ ಕ್ರಮ ಕೈಗೊಳ್ಳಬಹುದು.















