ಬೆಂಗಳೂರು:ನಂದಿನಿ ಉತ್ಪನ್ನಗಳಲ್ಲಿ ಕಲಬೆರಕೆ ತಡೆಯಲು ಕೆಎಂಎ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.ಪ್ರತಿ ವಾರದಲ್ಲಿ ಇಂತಿಷ್ಟು ಪ್ರಕರಣವನ್ನು ಪರೀಕ್ಷೆಗೊಳಪಡಿಸಿ, ವರದಿ ನೀಡಬೇಕು ಎನ್ನುವ ಸೂಚನೆಯನ್ನು ಕೆಎಂಎ ಜಾಗೃತ ತನಿಖಾದಳಕ್ಕೆ ನೀಡಲಾಗಿದೆ.
ಅಲ್ಲದೆ ತನಿಖಾ ದಳಕ್ಕೆ ಇದ್ದ ಸಿಬ್ಬಂದಿ ಕೊರತೆಯನ್ನು ನೀಗಿಸಿದ್ದು, ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ನಡೆದ ಕೆಲ ಪ್ರಕರಣಗಳು ಬಯಲಿಗೆ ಬಂದ ಬೆನ್ನಲ್ಲಿಯೇ ಜಾಗೃತ ತನಿಖಾ ದಳ ಸಕ್ರೀಯವಾಗಿ ಇಡೀ ರಾಜ್ಯದಾದ್ಯಂತ ಕೆಲಸ ಮಾಡುತ್ತಿದೆ.ನಂದಿನಿ ಬ್ರಾಂಡಿಂಗ್ ಕೂಡ ದುರುಪಯೋಗವಾಗುತ್ತಿರುವ ಪ್ರಕರಣವನ್ನು ಪತ್ತೆ ಹಚ್ಚಿದ್ದ ಕೆಎಂಎ ಜಾಗೃತ ತನಿಖಾದಳ ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಗಳ ಮೇಲೆ ಕ್ರಮ ತೆಗೆದುಕೊಂಡಿತ್ತು. ಮಾರುಕಟ್ಟೆಯಲ್ಲಿ ನಂದಿನಿ ಬ್ರಾಂಡಿಂಗ್‌ಗೆ ಹೆಚ್ಚಿನ ಬೇಡಿಕೆ ಇರುವ ಕಾರಣ, ಅದನ್ನು ಬಳಸಿಕೊಂಡು ಖಾಸಗಿಯವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಕಳ್ಳ ಮಾರ್ಗಗಳನ್ನು ಕಂಡುಕೊಂಡಿದ್ದರು. ಮೈಸೂರಿನಲ್ಲಿ ನಂದಿನಿ ತುಪ್ಪ ಕಲಬೆರಕೆ ಪ್ರಕರಣವನ್ನು ಭೇದಿಸಿದ್ದ ಕೆಎಂಎ್ ಜಾಗೃತ ದಳ ಮತ್ತೆ ಈ ನಿಟ್ಟಿನಲ್ಲಿ ನಿಗಾ ಇರಿಸಿದೆ.
890 ಸ್ಯಾಂಪಲ್ ಪರೀಕ್ಷೆ:ಆಹಾರ ಸುರಕ್ಷತಾ ಇಲಾಖೆಯ ಜೊತೆಗೂಡಿದ ಕೆಎಂಎ್ ಇಡೀ ರಾಜ್ಯದಾದ್ಯಂತ 890 ಕಡೆ ನಂದಿನಿ ಉತ್ಪನ್ನಗಳ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸುವ ಅಭಿಯಾನ ನಡೆಸಿತ್ತು.
ಮುಲಾಜಿಲ್ಲದೆ ಕ್ರಮ:ನಂದಿನಿ ಉತ್ಪನ್ನಗಳ ಬಗ್ಗೆ ಗ್ರಾಹಕರಿಂದ ದೂರುಗಳು ಬಂದಿದ್ದರೆ, ಅನುಮಾನವಿದ್ದರೆ ಆ ಬಗ್ಗೆ ಪರೀಕ್ಷೆ ಮಾಡಿ ಧೃಢಪಡಿಸಲಾಗುವುದು. ಕಳ್ಳ ಮಾರ್ಗದಲ್ಲಿ ಯಾರಾದರೂ ಬ್ರಾಂಡಿಂಗ್ ದುರುಪಯೋಗ ಮಾಡುತ್ತಿರುವ ಮಾಹಿತಿ ಬಂದರೂ ಮುಲಾಜಿಲ್ಲದೆ ಕ್ರಮತೆಗೆದುಕೊಳ್ಳಲು ಕೆಎಂಎ ಮುಂದಾಗಿದೆ.
ಕೆಎಂಎ ನಂದಿನ ಉತ್ಪನ್ನಗಳ ಕಲಬೆರಕೆ ಪ್ರಕರಣಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಗ್ರಾಹಕರು ಅಥವಾ ಸಾರ್ವಜನಿಕರಿಂದ ದೂರುಗಳು ಬಂದರೂ ಕ್ರಮ ವಹಿಸಲಾಗುವುದು. ಈ ಬಗ್ಗೆ ಜನರು ನಿಖರ ಮಾಹಿತಿಯನ್ನು ಕೆಎಂಎ್ಗೆ ನೀಡಲು ವಿನಂತಿಸಲಾಗಿದೆ.-ಶಿವಸ್ವಾಮಿ, ಎಂಡಿ, ಕೆಎಂಎ
















