RCB’ಗೆ ಅಧಿಕೃತ ಡೈರಿ ಪಾರ್ಟ್ನರ್ ಆದ ಕೆಎಂಎಫ್‌ ನಂದಿನಿ.

ಬೆಂಗಳೂರು: ಪ್ರತಿಷ್ಠಿತ ಐಪಿಎಲ್ ಟಿ-20 ಲೀಗ್ ಪಂದ್ಯಾವಳಿಯು ಇದೇ 28ರಿಂದ ಆರಂಭವಾಗುತ್ತಿದ್ದು, ರಾಜ್ಯದ ಹೆಮ್ಮಯ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನಂದಿನಿ ಬ್ರ್ಯಾಂಡ್ ಅನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಧಿಕೃತ ಡೇರಿ ಪಾಲುದಾರರಾಗಿ ಕೈಜೋಡಿಸಿದೆ.

ನಂದಿನಿ ಬ್ರ್ಯಾಂಡ್ ಸದಾ ಕ್ರೀಡೆ ಮತ್ತು ಯುವ ಜನತೆಯನ್ನು ಪ್ರೋತ್ಸಾಹಿಸುವ ಧ್ಯೇಯವನ್ನು ಹೊಂದಿದ್ದು, ರಾಜ್ಯದ ಹೆಮ್ಮೆಯ ಎರಡು ಪ್ರತಿಷ್ಠಿತ ಬ್ರ್ಯಾಂಡ್‌ಗಳಾದ ‘ನಂದಿನಿ ಮತ್ತು ಆರ್‌ಸಿಬಿ’ ಒಂದಾಗಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ತಿಳಿಸಿದ್ದಾರೆ.

ಆರ್‌ಸಿಬಿ ಅಭಿಮಾನಿಗಳೊಂದಿಗೆ ಸಂಪರ್ಕ ಬೆಳೆಸಿ ಲೀಗ್‌ನ ಉತ್ಸಾಹವನ್ನು ಸಂಭ್ರಮಿಸಲು ನಾವು ಎದುರು ನೋಡುತ್ತಿದ್ದೇವೆ. ನಂದಿನಿ ಬ್ರ್ಯಾಂಡ್ ಆರ್‌ಸಿಬಿ ತಂಡದ ಅಧಿಕೃತ ಡೇರಿ ಪಾರ್ಟ್ನರ್ ಆಗಿ ಕೈಜೋಡಿಸಿರುವುದು ರಾಜ್ಯದ ಎರಡು ಐಕಾನಿಕ್ ಬ್ರ್ಯಾಂಡ್‌ಗಳ ಒಕ್ಕೂಟವಾಗಿದೆ. ಕ್ರೀಡೆಯನ್ನು ಬೆಂಬಲಿಸುವ ನಂದಿನಿಯ ಪರಂಪರೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ಈ ಸಹಭಾಗಿತ್ವವು ರಾಜ್ಯದ ಕ್ರೀಡಾ ಉತ್ಸಾಹಕ್ಕೆ ಮತ್ತಷ್ಟು ಚೈತನ್ಯ ನೀಡಲಿದೆ. ನಂದಿನಿ ಬ್ರ್ಯಾಂಡ್ ವಿವಿಧ ಜಾಹೀರಾತು ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಅಭಿಯಾನವನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮಣ್ಣಿನೊಡನೆ ಗಾಢ ಬಾಂಧವ್ಯ ಹೊಂದಿರುವ ಎರಡು ಬ್ರ್ಯಾಂಡ್‌ಗಳು ಒಂದಾಗಿರುವುದು ವಿಶೇಷ ಸಂಗತಿ. ನಂದಿನಿಯ ವಿಶ್ವಾಸಾರ್ಹತೆ ಮತ್ತು ಮನೆಮಾತಾದ ಸ್ವಾಭಿಮಾನ ಈ ಸಹಭಾಗಿತ್ವವನ್ನು ಮತ್ತಷ್ಟು ಅರ್ಥಪೂರ್ಣವಾಗಿಸುತ್ತದೆ. ಈ ಆವೃತ್ತಿಯಲ್ಲಿ ಅಭಿಮಾನಿಗಳಿಗೆ ವಿಶೇಷ ಅನುಭವಗಳನ್ನು ನೀಡಲು ನಾವು ಕಾತುರರಾಗಿದ್ದೇವೆ ಎಂದು ಆರ್‌ಸಿಬಿ ಸಿಇಒ ರಾಜೇಶ್ ಮೆನನ್ ಪ್ರತಿಕ್ರಿಯಿಸಿದ್ದಾರೆ.