ಲೈಂಗಿಕ ಹಿಂಸಾಚಾರದ ಪ್ರಕರಣಗಳಲ್ಲಿ ಸಮಗ್ರ ವೈದ್ಯಕೀಯ ಆರೈಕೆಗಾಗಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ

ಮಣಿಪಾಲ: ಭಾರತ – ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್, ಮೆಡೆಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್, ವೈದ್ಯಕೀಯ ಮತ್ತು ನವೀನ ವಿಧಿವಿಜ್ಞಾನ ಕೇಂದ್ರ, ಕಸ್ತೂರ್ಬಾ ಮೆಡಿಕಲ್ ಕಾಲೇಜ್, ಮಣಿಪಾಲದ ಸಹಯೋಗದೊಂದಿಗೆ ಬೆಂಗಳೂರಿನ ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬೆಂಬಲದೊಂದಿಗೆ ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸೆ ಕುರಿತು ಎರಡು ದಿನಗಳ ರಾಷ್ಟ್ರೀಯ ಮಟ್ಟದ ವೈದ್ಯಕೀಯ ವಿಚಾರ ಸಂಕಿರಣವನ್ನು ಡಿಸೆಂಬರ್ 10 ಮತ್ತು11 ರಂದು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಈ ವಿಚಾರ ಸಂಕಿರಣವು ಭಾರತದಾದ್ಯಂತ ಲೈಂಗಿಕ ಶೋಷಣೆಯಲ್ಲಿ ಬದುಕುಳಿದವರ-ಕೇಂದ್ರೀಕರಿಸಿದ ಮಾದರಿಯ ಆರೈಕೆಯನ್ನು ಸ್ಥಾಪಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು. ಹಿರಿಯ ವೈದ್ಯಕೀಯ ಅಧ್ಯಾಪಕರು (ಫೊರೆನ್ಸಿಕ್ ಮೆಡಿಸಿನ್, ಸ್ತ್ರೀರೋಗ ಶಾಸ್ತ್ರ, ಶಿಶುವೈದ್ಯ ಶಾಸ್ತ್ರ, ಮನೋವೈದ್ಯಶಾಸ್ತ್ರ), ವಕೀಲರು ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತರು ಸೇರಿದಂತೆ ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರದ
ಕ್ಷೇತ್ರದ ತಜ್ಞರು, ಘಟನೆ ಬಳಿಕ ಬದುಕುಳಿದವರಿಗೆ ಅಡ್ಡಿಯಾಗುವ ರಚನಾತ್ಮಕ ಮತ್ತು ವ್ಯವಸ್ಥಿತ ನಿರೋಧಕಗಳನ್ನು ತಗ್ಗಿಸಲು ಉತ್ತಮ ನೀತಿಗಳು ಮತ್ತು ಅಭ್ಯಾಸಗಳ ಅಗತ್ಯವನ್ನು ಎತ್ತಿ ತೋರಿಸಿದರು. ಇಂತಹ ಘಟನೆಗಳಲ್ಲಿ ವೈದ್ಯಕೀಯ ಮತ್ತು ಮಾನಸಿಕ ಆರೈಕೆ, ಪೊಕ್ಸೊ ಪ್ರಕರಣ ಕಡ್ಡಾಯ ಪೊಲೀಸ್ ವರದಿ ಮಾಡುವಿಕೆ, ಆರೋಗ್ಯ ಕಾರ್ಯಕರ್ತರಲ್ಲಿ ಸಮಗ್ರ ವೈದ್ಯಕೀಯ ಶಿಕ್ಷಣ ಮತ್ತು ತರಬೇತಿಯ ಕೊರತೆ, ಪೂರ್ವಾಗ್ರಹ ಪೀಡಿತ ಮಾಧ್ಯಮ ನಿರೂಪಣೆಗಳು ಮತ್ತು ಜ್ಞಾನ ಮತ್ತು ಅರಿವಿನ ಕೊರತೆಯಿಂದಾಗಿ ಬದುಕುಳಿದವರ ಆರೋಗ್ಯದ ಮೇಲೆ ಪರಿಣಾಮ ಬೀರುವ ನಡವಳಿಕೆಯ ಕೊರತೆಗಳಂತಹ ಸಮಸ್ಯೆಗಳನ್ನು ಸಂಕಿರಣವು ಒಳಗೊಂಡಿತ್ತು.

ಬೆಂಗಳೂರಿನ ನಿಮ್ಹಾನ್ಸ್‌ನ ಮಾಜಿ ನಿರ್ದೇಶಕ ಪ್ರೊಫೆಸರ್ ಬಿ ಎನ್ ಗಂಗಾಧರ್ ಅವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿ, ವೈದ್ಯರ ಸಹಕಾರ ಮತ್ತು ತರಬೇತಿಯ ಅಗತ್ಯವನ್ನು ಒತ್ತಿ ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಗೌರವ ಅತಿಥಿಯಾಗಿದ್ದ ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ನೈತಿಕತೆ ಮತ್ತು ವೈದ್ಯಕೀಯ ನೋಂದಣಿ ಮಂಡಳಿಯ ಅಧ್ಯಕ್ಷ ಡಾ. ಅಚಲ್ ಗುಲಾಟಿ, ಅಸ್ತಿತ್ವದಲ್ಲಿರುವ ಅಡೆತಡೆಗಳನ್ನು ಗುರುತಿಸಿ ಹೊರಬರಲು ನೀತಿಗಳನ್ನು ರೂಪಿಸಬೇಕು ಎಂದರು.

ಮಣಿಪಾಲದ ಮಾಹೆಯ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಂಕ್ರಾಮಿಕ ಸಮಯದಲ್ಲಿ ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರದ ಘಟನೆಗಳು ಹಲವಾರು ಪಟ್ಟು ಹೆಚ್ಚಿವೆ ಎಂದು ವರದಿಗಳಿವೆ. ಆದರೆ ಒಟ್ಟಾರೆಯಾಗಿ ಈ ವಿಷಯದ ಬಗ್ಗೆ ಸರಿಯಾದ ಒಳನೋಟ ಮತ್ತು ಪುರಾವೆಗಳ ಕೊರತೆಯಿದೆ. ಇಂತಹ ವಿಚಾರ ಸಂಕಿರಣಗಳು ಈ ಅಂತರವನ್ನು ತುಂಬುತ್ತವೆ ಮತ್ತು ಅಸ್ತಿತ್ವದಲ್ಲಿರುವ ರಾಷ್ಟ್ರೀಯ ನೀತಿಗಳ ಪರಿಷ್ಕರಣೆಗೆ ಮಾರ್ಗಸೂಚಿಯನ್ನು ರೂಪಿಸುತ್ತವೆ ಎಂದು ಹೇಳಿದರು.

ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಇದರ ಭಾರತದ ವೈದ್ಯಕೀಯ ಸಂಯೋಜಕ ಡಾ ಹಿಮಾಂಶು ಎಂ ಮಾತನಾಡಿ, 2015 ರ ರಾಷ್ಟ್ರೀಯ ಮತ್ತು ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರದಿಂದ ಬದುಕುಳಿದ 10,000 ಜನರಲ್ಲಿ ಕೇವಲ 5 ಜನರು ಮಾತ್ರ ವೈದ್ಯಕೀಯ ಆರೈಕೆಯನ್ನು ಬಯಸುತ್ತಾರೆ. ಇದು ಅಲ್ಪ ಮತ್ತು ದೀರ್ಘಾವಧಿಯ ಆರೋಗ್ಯದ ಪರಿಣಾಮಗಳನ್ನು ಉಂಟುಮಾಡುತ್ತದೆ. ಎಂ.ಎಸ್.ಎಫ್ ಆಗಿ ನಾವು ಸುಧಾರಣೆಗಳಿಗಾಗಿ ಪ್ರತಿಪಾದಿಸುತ್ತಿದ್ದೇವೆ ಮತ್ತು ಇವುಗಳನ್ನು ಆರೋಗ್ಯ ಕ್ಷೇತ್ರ ಮತ್ತು ಶಿಕ್ಷಣ ಸಂಸ್ಥೆಗಳು ಮುನ್ನಡೆಸಬೇಕುಎಂದರು.

ಭಾರತೀಯ ಜನಸಂಖ್ಯೆಯ ಬಹುಪಾಲು ಜನರು ಗ್ರಾಮೀಣ ಪ್ರದೇಶದವರಾಗಿರುವುದರಿಂದ ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಮಾಹೆಯ ಸಹ ಕುಲಪತಿ ಡಾ. ಎಚ್ ಎಸ್ ಬಲ್ಲಾಳ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಜಗದೀಶ್ ರೆಡ್ಡಿ ಮಾತನಾಡಿ, ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರದ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ ಆದರೆ ಅದರ ಅನುಷ್ಠಾನದಲ್ಲಿ ನ್ಯೂನತೆಗಳಿವೆ. ಈ ವಿಷಯದ ಬಗ್ಗೆ ಆಳವಾದ
ಸಂಶೋಧನೆಯ ಅವಶ್ಯಕತೆಯಿದೆ. ನಾವು ನಮ್ಮದೇ ಆದ ಪುರಾವೆಗಳ ಆಧಾರದ ಮೇಲೆ ದೃಢವಾದ ನೀತಿಗಳನ್ನು
ಮಾಡಬೇಕು ಹೊರತು ಪಾಶ್ಚಿಮಾತ್ಯ ದೇಶಗಳ ಆಧಾರದ ಮೇಲಲ್ಲ ಎಂದರು.

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಶರತ್ ಕೆ ರಾವ್ ಸ್ವಾಗತಿಸಿ, ವಿಧಿವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ವಿನೋದ್ ನಾಯಕ್ ವಂದಿಸಿದರು.

ವಿಚಾರ ಸಂಕಿರಣದಲ್ಲಿನ ಪ್ರಸ್ತುತಿಗಳು ವಯಸ್ಸಿನ ಗುಂಪುಗಳು ಮತ್ತು ಆರ್ಥಿಕ ಸ್ತರಗಳಾದ್ಯಂತ ಮಹಿಳೆಯರ ವಿಶೇಷವಾಗಿ ಕೌಟುಂಬಿಕ ಹಿಂಸಾಚಾರ ಮತ್ತು ಲೈಂಗಿಕ ಹಿಂಸಾಚಾರದಿಂದ ಬದುಕುಳಿದ ಮಹಿಳೆಯರು ಎದುರಿಸುತ್ತಿರುವ ಆರೋಗ್ಯ ರಕ್ಷಣೆಯ ಅಡೆತಡೆಗಳನ್ನು ಒತ್ತಿಹೇಳಿದವು. ಮಹಿಳಾ ಹಕ್ಕುಗಳ ಕಾರ್ಯಕರ್ತರು ವಿಕಲಾಂಗ ಮಹಿಳೆಯರು ಮತ್ತು ಎಲ್.ಜಿ.ಬಿ.ಟಿ ಸಮುದಾಯದಂತಹ ದುರ್ಬಲ ಜನಸಂಖ್ಯೆಗೆ ಮಾನಸಿಕ ಮತ್ತು ಕಾನೂನು ಸಹಾಯದ ವಿಷಯದಲ್ಲಿ ಪ್ರವೇಶ ಸಮಸ್ಯೆಗಳನ್ನು ಎತ್ತಿ ತೋರಿಸಿದರು.

ಈ ವಿಚಾರ ಸಂಕಿರಣವು ಬಹುಶಿಸ್ತೀಯ ಕಾರ್ಯ ಗುಂಪುಗಳನ್ನು ರಚಿಸಿ ಲೈಂಗಿಕ ಶೋಷಣೆಯಲ್ಲಿ ಬದುಕುಳಿದ ರೋಗಿ ಕೇಂದ್ರಿತ ಆರೈಕೆಯನ್ನು ಒದಗಿಸಲು ಅಸ್ತಿತ್ವದಲ್ಲಿರುವ ಅಡೆತಡೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ಪ್ರಸ್ತುತಪಡಿಸಲು ನೀತಿ ಕ್ರಿಯಾ ಯೋಜನೆ ಮತ್ತು ಶಿಫಾರಸುಗಳೊಂದಿಗೆ ಅಗತ್ಯವಿರುವ ನೀತಿ ಬದಲಾವಣೆಗಳನ್ನು ಚರ್ಚಿಸಿ ಮಂಡಿಸಲಾಯಿತು.