ಕಿಶೋರ ಯಕ್ಷಗಾನ ಸಂಭ್ರಮ ಸಮಾರೋಪ ಸಮಾರಂಭ

ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಎರಡು ವಾರಗಳ ಪರ್ಯಂತ ನಡೆದ ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಸಮಾರಂಭ ರಾಜಾಂಗಣದಲ್ಲಿ ನಡೆಯಿತು. 28 ಶಾಲೆಗಳ ಸುಮಾರು 860 ವಿದ್ಯಾರ್ಥಿಗಳು ಕಿಶೋರ ಯಕ್ಷಗಾನ ಸಂಭ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ, ಈ ಕಲೆ ಮಕ್ಕಳನ್ನು ಸಂಸ್ಕೃತಿ ಸಂಪನ್ನರಾಗಿಸುವಲ್ಲಿ ಮಹತ್ತ್ವದ ಪಾತ್ರ ವಹಿಸಿದೆ. ಯಕ್ಷ ಶಿಕ್ಷಣ ಟ್ರಸ್ಟ್ ಇದನ್ನು ನಿರಂತರ ಮುಂದುವರಿಸಿಕೊಂಡು ಬರಲಿ ಎಂದು ಆಶೀರ್ವದಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕಯಶ್‍ಪಾಲ್ ಎ. ಸುವರ್ಣ ಮಾತನಾಡಿ, ಶುದ್ಧ ಸಂಕಲ್ಪದಿಂದ ಆರಂಭಗೊಂಡ ಈ ಮಹಾ ಅಭಿಯಾನವನ್ನು ನಾವೆಲ್ಲ ಸೇರಿ ಬೆಳೆಸೋಣ ಎಂದರು.

ಡಾ. ನಿ. ಬೀ. ವಿಜಯ ಬಲ್ಲಾಳ್ ಶುಭಾಶಂಸನೆಗೈದರು.

ಅಭ್ಯಾಗತರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕೆ. ಗಣಪತಿ, ಯು. ವಿಶ್ವನಾಥ ಶೆಣೈ ಭಾಗವಹಿಸಿದ್ದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ಎಸ್. ವಿ. ಭಟ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯಕ್ಷ ಶಿಕ್ಷಣದ ಗುರುಗಳನ್ನು , ಪ್ರಸಾಧನ ತಜ್ಞರನ್ನು ಶಾಲು ಹೊದಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಪ್ರಮಾಣ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ವಿತರಿಸಲಾಯಿತು. ನಾಲ್ವರು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.

ನಾರಾಯಣ ಎಂ. ಹೆಗಡೆ ಸ್ವಾಗತಿಸಿದರು. ಯಕ್ಷಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಸಿ ನಿರೂಪಿಸಿದರು. ಎಚ್. ಎನ್. ಶೃಂಗೇಶ್ವರ ವಂದಿಸಿದರು.