ಬಾರ್ಬಡೋಸ್ (ವೆಸ್ಟ್ ಇಂಡೀಸ್):ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಕದಿನ ಸರಣಿಯ ಮೊದಲೆರಡು ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕಿಶನ್ ಉತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ ಕಿಶನ್ ಸಚಿನ್ ದಾಖಲೆಯನ್ನು ಮುರಿದರು. ಭಾರತ ಕ್ರಿಕೆಟ್ ತಂಡದ ಫ್ಯೂಚರ್ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಇಶಾನ್ ಕಿಶನ್ ಸಹ ಒಬ್ಬರು.ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರು ಮಾಡಿದ್ದ ದಾಖಲೆಯನ್ನು ಯುವ ಆಟಗಾರ ಇಶಾನ್ ಕಿಶನ್ ಮುರಿದಿದ್ದಾರೆ.
ಬಾರ್ಬಡೋಸ್ನ ಬ್ರಿಡ್ಜ್ಟೌನ್ನಲ್ಲಿರುವ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ ಕಾರಣ ಗಿಲ್ ಜೊತೆ ಇಶಾನ್ ಕಿಶನ್ ಪಂದ್ಯವನ್ನು ಆರಂಭ ಮಾಡಿದರು. ಮೊದಲ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ತಮ್ಮ ಸ್ಥಾನವನ್ನು ಯುವ ಆಟಗಾರನಿಗೆ ಬಿಟ್ಟುಕೊಟ್ಟು 7ನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದರು. ಈ ಎರಡೂ ಪಂದ್ಯದಲ್ಲಿ ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡಿದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಇಶಾನ್ ಕಿಶನ್ ಏಕದಿನ ಕ್ರಿಕೆಟ್ನಲ್ಲಿ ಆರಂಭಿಕರಾಗಿ ಸಚಿನ್ ತೆಂಡೂಲ್ಕರ್ ಮಾಡಿದ್ದ ದಾಖಲೆಯನ್ನು ಮುರಿದರು.
1994 ರಲ್ಲಿ ಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್ ಭಾರತ ತಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿದರು. ಅವರು ತಮ್ಮ ಮೊದಲ ಐದು ಇನ್ನಿಂಗ್ಸ್ಗಳಲ್ಲಿ ಒಟ್ಟು 321 ರನ್ ಗಳಿಸಿದರು. ವಿಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ 55 ರನ್ಗಳ ಇನ್ನಿಂಗ್ಸ್ ಆಡಿದ ಇಶಾನ್ ಆರಂಭಿಕರಾಗಿ 348 ರನ್ ಕಲೆಹಾಕಿ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು.25 ವರ್ಷದ ಬಿಹಾರದ ಬ್ಯಾಟರ್ ಕಿಶನ್ ಬ್ಯಾಕ್-ಟು-ಬ್ಯಾಕ್ ಅರ್ಧಶತಕದೊಂದಿಗೆ ದಂತಕಥೆ ಸಚಿನ್ ತೆಂಡೂಲ್ಕರ್ ನಿರ್ಮಿಸಿದ ದೀರ್ಘಾವಧಿಯ ದಾಖಲೆಯನ್ನು ಮುರಿದು ಭಾರತೀಯ ಆರಂಭಿಕರ ಎಲೈಟ್ ಪಟ್ಟಿಯಲ್ಲಿ ನಂ. 1 ಸ್ಥಾನವನ್ನು ತಲುಪಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಆರಂಭಿಕರಾಗಿ ಐದು ಇನ್ನಿಂಗ್ಸ್ನಲ್ಲಿ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಈ ಮೊದಲು ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಈಗ ಕಿಶನ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ..
ಉತ್ತಮ ಪ್ರದರ್ಶನದ ಹೊರತಾಗಿಯೂ ಅವರಿಗೆ ಇದೇ ವರ್ಷ ಜನ ವರಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡಲು ಅವಕಾಶ ಸಿಗಲಿಲ್ಲ. ಕಿಶನ್ ಮೂರನೇ ಏಕದಿನ ಇನ್ನಿಂಗ್ಸ್ ಆಡಿದ್ದು ಮಾರ್ಚ್ನಲ್ಲಿ ಆಸ್ಟ್ರೇಲಿಯಾ ವಿರುದ್ಧವಾಗಿತ್ತು. ಅದರಲ್ಲೂ ಮೂರು ರನ್ಗೆ ಔಟ್ ಆಗಿದ್ದರು. ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 1 ನೇ ಮತ್ತು 2 ನೇ ಏಕದಿನ ಪಂದ್ಯದಲ್ಲಿ ಬ್ಯಾಕ್-ಟು-ಬ್ಯಾಕ್ ಅರ್ಧ ಶತಕಗಳೊಂದಿಗೆ ಸಚಿನ್ ಅವರ ರನ್ನ್ನು ಮೀರಿಸಿದ್ದಾರೆ.ಕಿಶನ್ ಕಳೆದ ವರ್ಷ ಫೆಬ್ರವರಿ 6 ರಂದು ಅಹಮದಾಬಾದ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆರಂಭಿಕರಾಗಿ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದರು, ಇದರಲ್ಲಿ ಅವರು 28 ರನ್ ಗಳಿಸಲಷ್ಟೇ ಶಕ್ತರಾದರು. ಭಾರತಕ್ಕಾಗಿ ಅವರು 10 ತಿಂಗಳ ನಂತರ ಎರಡನೇ ಏಕದಿನ ಪಂದ್ಯವನ್ನು ಆಡಿದರು. ಬಾಂಗ್ಲಾದೇಶದ ವಿರುದ್ಧ 131 ಎಸೆತಗಳಲ್ಲಿ 210 ರನ್ ಗಳಿಸಿದರು. ಏಕದಿನದಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಮತ್ತು ವೇಗದ ಬ್ಯಾಟರ್ ಎಂಬ ದಾಖಲೆಯನ್ನು ಅಂದು ಮಾಡಿದ್ದರು












