ಉಡುಪಿ: ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿ ಇದರ ತೃತೀಯ ವಾರ್ಷಿಕೋತ್ಸವ ಅಂಗವಾಗಿ “ಕಿರಾಡಿ ಯಕ್ಷ ಪ್ರಣತಿ- 2025” ಕಾರ್ಯಕ್ರಮವನ್ನು ಇದೇ ಆಗಸ್ಟ್ 17ರಂದು ಮಂದಾರ್ತಿ ಶೇಡಿಕೊಡು ದುರ್ಗಾ ಸನ್ನಿಧಿಯಲ್ಲಿ ಆಯೋಜಿಸಲಾಗಿದೆ ಎಂದು ಯಕ್ಷ ನಕ್ಷತ್ರ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಪ್ರಕಾಶ್ ಮೊಗವೀರ ಕಿರಾಡಿ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರತಿವರ್ಷದಂತೆ ನೀಡಲಾಗುವ 2025 ಯಕ್ಷ ನಕ್ಷತ್ರ ಪ್ರಶಸ್ತಿಗೆ ಖ್ಯಾತ ಪ್ರಸಂಗಕರ್ತರಾದ ಕಂದಾವರ ರಘುರಾಮ ಶೆಟ್ಟಿ ಹಾಗೂ 2025 ರ ಯಕ್ಷ ನಕ್ಷತ್ರ ಕಲಾಪೋಷಕ ಪ್ರಶಸ್ತಿಗೆ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಅವರು ಆಯ್ಕೆಗೊಂಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ದೇವದಾಸ ಶೆಣೈ ಆರ್ಗೋಡು, ಎಂ.ಕೆ.ರಮೇಶ ಆಚಾರ್ಯ, ನರಾಡಿ ಭೋಜರಾಜ ಶೆಟ್ಟಿ ರಮೇಶ್ ಬೆಲ್ತೂರು, ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ನಾಗೂರು ಶೀನ ದೇವಾಡಿಗ ಅವರಿಗೆ ಯಕ್ಷ ಪ್ರಣತಿ ಗೌರವ ನೀಡಲಾಗುವುದು. ಪ್ರತಿಭಾವಂತ ಕಲಾವಿದರಾದ ಶಶಿಕಾಂತ ಶೆಟ್ಟಿ ಕಾರ್ಕಳ, ಈಶ್ವರ ನಾಯ್ಕ್ ಮಂಕಿ, ಡಾ.ಪ್ರಖ್ಯಾತ ಶೆಟ್ಟಿ, ಸುಧಾಕರ ಕೊಠಾರಿ ಯಳಜಿತ್, ಗಣೇಶ ನಾಯ್ಕ, ಎಡಮೊಗೆ, ಗೋವಿಂದ ವಂಡಾರು ಇವರುಗಳಿಗೆ ಪ್ರೋತ್ಸಾಹಕ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
ಬೆಳಿಗ್ಗೆ 9.30ಕ್ಕೆ ಸರಿಗಮಪದ ಎನ್ನುವ ಸಪ್ತಸ್ವರ ಕಾರ್ಯಕ್ರಮದ ಮೂಲಕ ಪ್ರೊ. ಪವನ್ ಕಿರಣಕೆರೆ ಅವರು ಚೌಕಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ತೆಂಕು ಹಾಗೂ ಬಡಗುತಿಟ್ಟಿನ ಭಾಗವತರಿಂದ ಗಾನವೈಭವ ನಡೆಯಲಿದೆ. ಬೆಳಿಗ್ಗೆ 11.30 ನಡೆಯುವ ಸಭಾ ಕಾರ್ಯಕ್ರಮವನ್ನು ಮಂದಾರ್ತಿ ದೇವಸ್ಥಾನದ ಅನುವಂಶಿಕ ಮೊಕ್ತಸರರಾದ ಧನಂಜಯ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಉದ್ಯಮಿ ಹಾಗೂ ಕಲಾಪೋಷಕರಾದ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನ ಕಲಾವಿದ ವಾಸುದೇವ ರಂಗಭಟ್ ಶುಭಾಸಂಶನಗೈಯಲಿದ್ದಾರೆ ಎಂದು ತಿಳಿಸಿದರು.
ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಯಕ್ಷೇಶ್ವರಿ ಯಕ್ಷಗಾನ ತಂಡದಿಂದ ಸುದರ್ಶನ ವಿಜಯ ಮತ್ತು ಮಧ್ಯಾಹ್ನ 3 ಗಂಟೆಗೆ ಲೀಲಾಮಾನುಷ ವಿಗ್ರಹ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 4 ಗಂಟೆಗೆ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾಕಾರ್ಯಕ್ರಮದ ನಂತರ ತೆಂಕು ಬಡಗಿನ ಸುಪ್ರಸಿದ್ದ ಕಲಾವಿದರಿಂದ ಅಮೃತ ಸೋಮೇಶ್ವರ ವಿರಚಿತ ಕಾಯಕಲ್ಪ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹನುಮಗಿರಿ ಮೇಳದ ಕಲಾವಿದ ಸಂತೋಷ ಹಿಲಿಯಾಣ, ಮಂದಾರ್ತಿ ಮೇಳದ ಕಲಾವಿದ ಸಂದೇಶ್ ಶೆಟ್ಟಿ ಆರ್ಡಿ, ಯಕ್ಷನಕ್ಷತ್ರ ಟ್ರಸ್ಟ್ ಸದಸ್ಯರಾದ ಪ್ರಶಾಂತ್ ಮೊಗವೀರ ನಡೂರು, ನಾಗರಾಜ ಕುಂದರ್ ನಡೂರು, ಗೌರವ ಸಲಹೆಗಾರ ಅಶೋಕ್ ಕುಂದರ್ ಮಂದಾರ್ತಿ, ಸಾಲಿಗ್ರಾಮ ಮೇಳದ ಕಲಾವಿದ ಪ್ರಸನ್ನ ಶೆಟ್ಟಿಗಾರ್ ಇದ್ದರು.












