ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಹಲವು ಬದಲಾವಣೆಗಳು ಸಹಜವಾಗಿ ಸಂಭವಿಸುತ್ತವೆ. ಆದರೆ, 40 ವರ್ಷ ದಾಟಿದ ಬಳಿಕ ಮೂತ್ರಪಿಂಡ (ಕಿಡ್ನಿ) ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ. ಆರಂಭಿಕ ಹಂತದಲ್ಲಿ ಕಿಡ್ನಿ ಕಾಯಿಲೆಗಳು ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದ ಕಾರಣ, ತಡವಾಗಿ ಪತ್ತೆಯಾದರೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
ವೈದ್ಯರ ಪ್ರಕಾರ, 40 ವರ್ಷಗಳ ನಂತರ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಸ್ಥೂಲಕಾಯದಂತಹ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇವು ಕ್ರಮೇಣ ಮೂತ್ರಪಿಂಡಗಳ ಕಾರ್ಯಕ್ಷಮತೆಯ ಮೇಲೆ ದುಷ್ಪರಿಣಾಮ ಬೀರಿ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತವೆ.

ತಜ್ಞರ ಹೇಳುವಂತೆ, ಮೂತ್ರಪಿಂಡವು ಆರಂಭದಲ್ಲಿ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದರೂ, ಕೆಲವು ಕೆಟ್ಟ ಜೀವನಶೈಲಿ ಅಭ್ಯಾಸಗಳು ಅದರ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತವೆ. ಕಡಿಮೆ ನೀರು ಕುಡಿಯುವುದು, ಹೆಚ್ಚು ಉಪ್ಪು ಸೇವಿಸುವುದು, ಫಾಸ್ಟ್ ಫುಡ್ಗಳ ಅತಿಯಾದ ಸೇವನೆ, ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ನಿರಂತರವಾಗಿ ಸೇವಿಸುವುದು ಮತ್ತು ಮೂತ್ರವನ್ನು ದೀರ್ಘಕಾಲ ತಡೆಹಿಡಿಯುವುದು ಕಿಡ್ನಿಗೆ ಅಪಾಯಕಾರಿ.
ಮೂತ್ರವನ್ನು ಪದೇಪದೇ ತಡೆಹಿಡಿಯುವ ಅಭ್ಯಾಸದಿಂದ ಮೂತ್ರನಾಳದ ಸೋಂಕು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಇವು ಮುಂದಿನ ದಿನಗಳಲ್ಲಿ ಕಿಡ್ನಿಯ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ವಿಶ್ವದಾದ್ಯಂತ ಹೆಚ್ಚಾಗುತ್ತಿರುವುದು ವೈದ್ಯರನ್ನು ಆತಂಕಕ್ಕೀಡು ಮಾಡಿದೆ. ಆದ್ದರಿಂದ 40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಕಿಡ್ನಿ ಕಾರ್ಯಕ್ಷಮತೆ ಪರೀಕ್ಷೆ (Kidney Function Test) ಮಾಡಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಕುಟುಂಬದಲ್ಲಿ ಮಧುಮೇಹ ಅಥವಾ ರಕ್ತದೊತ್ತಡದ ಇತಿಹಾಸವಿದ್ದರೆ, ವೈದ್ಯರ ಸಲಹೆಯಂತೆ ಇನ್ನಷ್ಟು ನಿಯಮಿತ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ.















