ಮಲ್ಲಿಕಾರ್ಜುನ ಖರ್ಗೆ-ಭಜರಂಗದಳ ಪ್ರಕರಣ: ಪಂಜಾಬ್ ನ ಸಂಗ್ರೂರ್ ಕೋರ್ಟಿನಿಂದ ಸಮನ್ಸ್

ಸಂಗ್ರೂರ್‌: ಹಿಂದೂ ಸುರಕ್ಷಾ ಪರಿಷತ್‌ನ ಸಂಸ್ಥಾಪಕ ಹಿತೇಶ್ ಭಾರದ್ವಾಜ್ ಅವರು ಸಲ್ಲಿಸಿರುವ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪಂಜಾಬ್‌ನ ಸಂಗ್ರೂರ್‌ನ ನ್ಯಾಯಾಲಯವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮನ್ಸ್ ನೀಡಿದೆ.

ಇತ್ತೀಚೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಜರಂಗದಳದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ಪಿ.ಎಫ್.ಐ ಸಂಘಟನೆಯ ಜೊತೆ ಸಮೀಕರಿಸಿತ್ತು ಮತ್ತು ದ್ವೇಷ ಭಾವನೆಗಳನ್ನು ಪ್ರಚೋದಿಸುವ ಸಂಘಟನೆಗಳನ್ನು ನಿಷೇಧಿಸುವ ಭರವಸೆ ನೀಡಿತ್ತು.

ಈ ಬಗ್ಗೆ ತನ್ನ ತೀಕ್ಷ್ಣ ವಿರೋಧವನ್ನು ಪ್ರಕಟಿಸಿದ್ದ ವಿಶ್ವ ಹಿಂದೂ ಪರಿಷತ್‌ ಚಂಡೀಗಡ ಘಟಕ ಮತ್ತು ಭಜರಂಗದಳ ತನ್ನ ಮಾನನಷ್ಟ ಆಗಿದೆ ಎಂದು 100 ಕೋಟಿ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿತ್ತು.

‘ಭಜರಂಗದಳ ಹಿಂದೂಸ್ತಾನ್’ ಸಂಘಟನೆಯ ಅಧ್ಯಕ್ಷ ಹಿತೇಶ್ ಭಾರದ್ವಾಜ್‌ ಪಂಜಾಬ್‌ನ ಸಂಗ್ರೂರ್‌ ನ್ಯಾಯಾಲಯದಲ್ಲಿ ದೂರು ದಾಖಲಿಸಿ 100 ಕೋಟಿ ರೂಪಾಯಿ ಮಾನಹಾನಿ ಪರಿಹಾರ ನೀಡುವಂತೆಯೂ ಮನವಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಕೈಗೆತ್ತಿಕೊಂಡ ಸಂಗ್ರೂರ್ ನ್ಯಾಯಾಲಯ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮನ್ಸ್ ಜಾರಿ ಮಾಡಿದೆ.