ಇಲ್ಲಿ ಮಕ್ಕಳೇ ಮಾಡ್ತಾರೆ ಸಾವಯವ ಕೃಷಿ: ಈ ಅಂದ ಚಂದದ ಶಾಲೆ‌ ನೋಡೋದೇ ಖುಷಿ: ರಾಜ್ಯಕ್ಕೆ ಮಾದರಿಯಾದ ಸರಕಾರಿ ಶಾಲೆಯ ಕತೆ ಕೇಳಿ!

ಕಾರ್ಕಳ:ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಶಾಲೆ.  ಇಲ್ಲಿನ ಪರಿಸರದ ಸೌಂದರ್ಯಕ್ಕೆ, ಶಾಲಾ ಆವರಣದ ಸ್ವಚ್ಛತೆಗೆ, ಶಾಲಾ ಹೊರಗೋಡೆಗಳ ವರ್ಲಿ ಚಿತ್ರಗಳಿಗೆ, ಶಾಲೆಯ ಮುಂದಿರುವ ಉದ್ಯಾನಕ್ಕೆ ಮಾರುಹೋಗದವರಿಲ್ಲ.ವಿದ್ಯಾರ್ಥಿಗಳ ಶಿಸ್ತು, ವಿಶಾಲವಾದ ಆಟದ ಮೈದಾನ, ವಿಸ್ತೃತವಾದ ಶಾಲಾ ಜಮೀನು, ಹೂಬಳ್ಳಿಗಳಿಂದ ಆವರಿಸಿರುವ ಹಚ್ಚಹಸುರಿನ ಓಪನ್‌ ಸ್ಟೇಜ್, ಗೋಡೆಗಳಲ್ಲಿ ಸುಂದರ ವಿನ್ಯಾಸವಿರುವ, ಕಲಿಕೆಗೆ ಪೂರಕವಾದ ಚಾರ್ಟ್‌ ಗಳಿಂದ ಕಂಗೊಳಿಸುವ ತರಗತಿ ಕೊಠಡಿಗಳು, ಗ್ರೀನ್‌ ಬೋರ್ಡ್‌ ಹಾಗೂ ಅದರ ಸುತ್ತಲಿನ ಬಣ್ಣದ ಚೌಕಟ್ಟು ಇತ್ಯಾದಿಗಳಿಂದ ಕಂಗೊಳಿಸುವ ಈ ಶಾಲೆಯೇ ಕಾರ್ಕಳ ತಾಲೂಕಿನ ಕೆರುವಾಶೆಯ ಬಂಗ್ಲೆ ಗುಡ್ಡೆಯ ಸರಕಾರಿ ಶಾಲೆ.
ಪರಿಸರದ ಕಲರವ:ಮಾದರಿ ಶಿಕ್ಷಣ
ಇಲ್ಲಿನ ಮಕ್ಕಳು ಪರಿಸರ ಕಾಳಜಿಯ ಸಾವಯವ ಕೃಷಿ ಮಾಡುತ್ತಾರೆ. ನೀರು ಹಾಕಿ  ಸಲಹುತ್ತಿದ್ದಾರೆ.
ಕ್ಲಾಸಿನ ಗೋಡೆ ಮೇಲೆ ಪ್ರೊಜೆಕ್ಟರ್ ಜೊತೆ ಶಿಕ್ಷಣ, ಒಂದನೆ ತರಗತಿಯ ವಿದ್ಯಾರ್ಥಿ ಗಳಿಗೆ ಕಂಪ್ಯೂಟರ್ ಶಿಕ್ಷಣ , ಹೊರಗಡೆಯ  ಆಟೋಟಕ್ಕೆ ಪೂರಕವಾದ ಆಟೋಟ ಸಲಕರಣೆಗಳು, ನಲಿಕಲಿಯ ಶಿಕ್ಷಣ , ಶಾಲಾ ಪೋಷಕರಿಗೆ ಹಾಗೂ ಸ್ಥಳಿಯರಿಗಾಗಿ ಸಾರ್ವಜನಿಕ ಲೈಬ್ರರಿ.ಅಬ್ಬಾ ಇದೊಂದು ಖಾಸಗಿ ಶಾಲೆಯನ್ನೂ ಮೀರಿಸಿದ ಶಾಲೆಯಂತಿದೆ.  ಮೊನ್ನೆಯಷ್ಟೆ ಇಪ್ಪತ್ತೈದು ವಿದ್ಯಾರ್ಥಿಗಳು ಇದ್ದ ಸರಕಾರಿ ಶಾಲೆಯಲ್ಲೀಗ ಕೇವಲ ಎರಡು ವರ್ಷಗಳಲ್ಲಿ ನೂರ ಹದಿನೈದು ವಿದ್ಯಾರ್ಥಿಗಳಿದ್ದಾರೆ.  ಅದಕ್ಕೆ  ಕಾರಣ ಇಲ್ಲಿ ಕನ್ನಡ ಮಾಧ್ಯಮದಲ್ಲಿ ಕೊಡುವ ಆಂಗ್ಲ ಶಿಕ್ಷಣ. ಈ ಇಂಗ್ಲೀಷ್ ಶಿಕ್ಷಣವು ಭಯರಹಿತ ವಾಗಿದ್ದು ಶಿಶು ಸ್ನೇಹಿಯಾದ  ಭೌತಿಕ ರಚನಾ ತತ್ವವಾದ ಶಿಕ್ಷಣವನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಚರ್ಚಾ ಸ್ಪರ್ಧೆ, ಗುಂಪು ಚರ್ಚೆ ಸೇರಿದಂತೆ ವಿವಿಧ ಸ್ಪರ್ಧೆ ಏರ್ಪಡಿಸಿ ಪಾಠ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ವಾರ್ಷಿಕ ಪರೀಕ್ಷೆಗೆ ಅಣಿಗೊಳಿಸುತ್ತಿದ್ದಾರೆ
ಸುತ್ತ ಮುತ್ತಲಿನ ವಿವಿಧ ಗ್ರಹಿಕಾ ಕಲಿಕೆಗಳು ,ಪರಿಸರ ಪಾಠಗಳು,  ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯರಾದ ಶಿಕ್ಷಣದ ರೂವಾರಿ  ಸಂಜೀವ ದೇವಾಡಿಗ.
ವಿದ್ಯಾರ್ಥಿಗಳಲ್ಲಿ ಜಾಗ್ರತಿ: ವಿದ್ಯಾರ್ಥಿಗಳು  ಪ್ಲಾಸ್ಟಿಕ್ ಬಿಸಾಡದಂತೆ ಪ್ಲಾಸ್ಟಿಕ್ ಮನೆಯ ನಿರ್ಮಾಣ ಮಾಡಿ  ಅರಿವು ಮೂಡಿಸಲಾಗುತ್ತಿದೆ. ಸಾವಯವ ಕೃಷಿ ಮಾಡುತ್ತ ಬಿಸಿಯುಟದೊಡನೆ ಹಳ್ಳಿಯ ಬಸಳೆ ಹರಿವೆ ನುಗ್ಗೆಕಾಯಿ, ಬೆಂಡೆ ,ಬದನೆಕಾಯಿ ಎಲ್ಲವು ಇಲ್ಲಿ ಲಭ್ಯ. ಜೊತೆಗೆ ತರಕಾರಿ ವ್ಯಾಪಾರ ಮಾಡುವ ಮೂಲಕ ಶಾಲೆಗೆ ಆದಾಯ ಬರುತ್ತಿದೆ. ಶಾಲೆಯ ಜೊತೆಗೆ ಸಾರ್ವಜನಿಕರ ಸಹಕಾರ ಈ ಶಾಲೆಗೆ  ಪ್ರೇರಣೆ ಕೊಡುತ್ತಿರುವುದು ತರಕಾರಿ ಕೃಷಿಗೆ ಉತ್ತೇಜನ‌ ನೀಡುತ್ತಿದೆ. ಇಂತಹ ಶಾಲೆಗಳ ಸಂಖ್ಯೆ ಶಾಸ್ತಿಯಾಗಲಿ ಎನ್ನುವುದೇ ನಮ್ಮೆಲ್ಲರ ಹಾರೈಕೆ.
-ರಾಮ್ ಅಜೆಕಾರ್