ಕೇರಳದ ಯುವಕ ನೇಣಿಗೆ ಶರಣು

ಮಣಿಪಾಲ: ಕೇರಳ ಮೂಲದ ಯುವಕನೊಬ್ಬ ಈಶ್ವರನಗರದ ಮಸೀದಿ ಸಮೀಪದ ಹಾಡಿಯಲ್ಲಿ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.

ಮೃತರನ್ನು ಕಾರ್ಪೆಂಟರ್‌ ರೋಹಿ ಅಗೋಸ್ಟಿನ್ ಎಂದು ಗುರುತಿಸಲಾಗಿದೆ. ಮಣಿಪಾಲ ಠಾಣೆಯ ಎಎಸ್‌ಐ ಮನೋಹರ್ ಹಾಗೂ ಮುಖ್ಯ ಆರಕ್ಷಕ ಸುಕುಮಾರ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಕಾನೂನು ಪ್ರಕ್ರಿಯೆ ಕೈಗೊಂಡರು.

ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಮರದ ಕೊಂಬೆಯಲ್ಲಿ ನೇತಾಡುತ್ತಿದ್ದ ಮೃತದೇಹವನ್ನು ಕುಣಿಕೆಯಿಂದ ಕೆಳಗಿಳಿಸಿ, ಮಣಿಪಾಲ ಕೆಎಂಸಿ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಪೊಲೀಸರಿಗೆ ನೆರವಾದರು.

ಉಡುಪಿಯ ಕೇರಳಂ ಸಮಾಜ ಸಂಘಟನೆಯ ಪದಾಧಿಕಾರಿಗಳಾದ ಗಣೇಶ್ ಹಾಗೂ ಬಿನೇಶ್ ಸ್ಥಳಕ್ಕೆ ಭೇಟಿ ನೀಡಿ ಮೃತರ ವಿಳಾಸ ಪತ್ತೆಹಚ್ಚುವಲ್ಲಿ ನೆರವಾದರು.