ಕೇರಳ ರಾಜ್ಯದಲ್ಲಿ ಸಿಲುಕಿದ್ದ 41 ಯಾಂತ್ರೀಕೃತ ಬೋಟುಗಳು ಜಿಲ್ಲೆಗೆ ವಾಪಸ್ 

ಉಡುಪಿ: ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಚರವತ್ತೂರು, ಚೊಂಬಲ್ ಮತ್ತು ಕಣ್ಣೂರುನಲ್ಲಿ ಸಿಲುಕಿದ್ದ ಉಡುಪಿ ಜಿಲ್ಲೆಯ 41 ಬೋಟುಗಳು ರಾಜ್ಯ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಸಹಕಾರದಿಂದ ಇಂದು ಬೋಟ್ ಮಾಲೀಕ ಮೀನುಗಾರರ ಕೈ ಸೇರಲಿವೆ.
ಸಚಿವರು ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅವರೊಂದಿಗೆ ಚರ್ಚಿಸಿ ಕೇರಳ ಸರ್ಕಾರದ ಜತೆಗೆ ಸಂಪರ್ಕ ಸಾಧಿಸಿದ್ದರು. ಅದು ಫಲಪ್ರದವಾಗಿದ್ದು, ಇದೀಗ ಎರಡು ರಾಜ್ಯಗಳ ಒಪ್ಪಂದದಂತೆ ಇಂದು ಮಧ್ಯಾಹ್ನ 1 ಗಂಟೆಗೆ ಬೋಟುಗಳ ಮಾಲೀಕ ಮೀನುಗಾರರು ಬೋಟ್‌ನ್ನು ಮರಳಿ ತರಲು ಇನ್ನಿತರ ಮೀನುಗಾರರ ಜೊತೆಗೆ, ಮೂರು ವಿಶೇಷ ಯಾಂತ್ರೀಕೃತ ಬೋಟುಗಳ ಮೂಲಕ ಕೇರಳಕ್ಕೆ ತೆರಳಿದ್ದಾರೆ.
ಕೇರಳಕ್ಕೆ ಹೋಗಿ ಬರುವ ಪ್ರಯಾಣ ವೆಚ್ಚವನ್ನು ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಭರಿಸುವಂತೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸಚಿವ ಕೋಟ ನಿರ್ದೇಶನ ನೀಡಿದ್ದಾರೆ. ಇದರಿಂದ ಸಂಕಷ್ಟದಲ್ಲಿ ಸಿಲುಕಿರುವ 41 ಯಾಂತ್ರೀಕೃತ ಬೋಟುಗಳ ಮೀನುಗಾರರಿಗೆ ಸಹಕಾರಿ ಆಗಲಿದೆ.