ತಿರುವನಂತಪುರ: ಚಿನ್ನಾಭರಣ ಹಗರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಸ್ವಪ್ನಾ ಸುರೇಶ್ ಆರೋಪ ಮಾಡಿದ ಬೆನ್ನಲ್ಲೇ, ಅವರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಘಟಕ ಗುರುವಾರ ತಿರುವನಂತಪುರದಲ್ಲಿ ಪ್ರತಿಭಟನೆ ನಡೆಸಿದೆ. ಕೇರಳದ ರಾಜಧಾನಿಯಲ್ಲಿ ಕೇರಳ ಕಾಂಗ್ರೆಸ್ ಮಹಿಳಾ ಘಟಕ ಹಾಗೂ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಪ್ರಯೋಗಿಸಿದ್ದಾರೆ.
ಚಿನ್ನ ತುಂಬಿದ ಬಿರಿಯಾನಿ ಪಾತ್ರೆಗಳನ್ನು ಸಿಎಂ ಮನೆಗೆ ಕಳುಹಿಸಲಾಗಿದೆ ಎಂಬ ಆರೋಪದ ನಡುವೆ ಮಹಿಳಾ ಕಾಂಗ್ರೆಸ್, ಕೇರಳ ಸಿಎಂ ವಿರುದ್ಧ ಕುಹಕವಾಡಿದ್ದು, ‘ಬಿರಿಯಾನಿ ಚಾಲೆಂಜ್’ ಅನ್ನು ಆಯೋಜಿಸಿದ್ದಲ್ಲದೆ, ಕೇರಳ ಸಿಎಂ ಪ್ರತಿಕೃತಿ ದಹಿಸಿದೆ. ಕೇರಳದ ಚಿನ್ನಾಭರಣ ಹಗರಣ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಪಿಣರಾಯಿ ವಿರುದ್ಧ ಘೋಷಣೆ ಕೂಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರ ಮತ್ತು ಗುಂಪಿನ ನಡುವೆ ಚಕಮಕಿ ನಡೆದಿದ್ದು, ಗುಂಪನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದ್ದಾರೆ.
ಅಕ್ರಮ ಸಾಗಣೆ ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ಬಹಿರಂಗಪಡಿಸುವುದಾಗಿ ಭರವಸೆ ನೀಡಿದ್ದ ಸ್ವಪ್ನಾ ಸುರೇಶ್, ಸಿಎಂ ಪತ್ನಿ ಕಮಲಾ, ಪುತ್ರಿ ವೀಣಾ ಮತ್ತು ಇತರ ಉನ್ನತ ವ್ಯಕ್ತಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪಿಣರಾಯಿ, ಇದು ಕೆಲವು ರಾಜಕೀಯ ಕುತಂತ್ರದ ಭಾಗವಾಗಿದೆ ಎಂದಿದ್ದಾರೆ.
#WATCH Police use water cannon against Youth Congress workers staging a protest demanding the resignation of Kerala CM Pinarayi Vijayan over gold smuggling case, near the Secretariat in Thiruvananthapuram pic.twitter.com/QAPCbj8Amk
— ANI (@ANI) June 9, 2022