ಪಾನಮತ್ತನಾಗಿ ಪೊಲೀಸರೊಂದಿಗೆ ಜೈಲರ್ ನಟನ ಗಲಾಟೆ ಪ್ರಕರಣ: ಜಾಮೀನು ನೀಡಿದ್ದಕ್ಕೆ ಪೊಲೀಸರ ಮೇಲೆ ಹರಿಹಾಯ್ದ ವಿರೋಧ ಪಕ್ಷ ಕಾಂಗ್ರೆಸ್

ಕೊಚ್ಚಿ: ಪಾನಮತ್ತನಾಗಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗಲಾಟೆ ಸೃಷ್ಟಿಸಿದ ಆರೋಪದ ಮೇಲೆ ಬಂಧಿತರಾಗಿರುವ ಜೈಲರ್ ಚಿತ್ರದ ಖಳ ನಟ ವಿನಾಯಕನ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳನ್ನು ಮಾತ್ರ ಹಾಕಿರುವ ಕೇರಳ ಪೊಲೀಸರ ನಡೆಯನ್ನು ವಿರೋಧ ಪಕ್ಷ ಕಾಂಗ್ರೆಸ್ ಖಂಡಿಸಿದೆ.

ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಹೆಂಡತಿಯೊಂದಿಗೆ ವಿವಾದದ ಕುರಿತಾಗಿ ಪೊಲೀಸರು ಮಂಗಳವಾರ ಸಂಜೆ ಠಾಣೆಗೆ ಕರೆದಿದ್ದ ಸಂದರ್ಭದಲ್ಲಿ ಎರ್ನಾಕುಲಂ ಟೌನ್ ನಾರ್ತ್ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಇದೀಗ ಅವರನ್ನು ಬಿಡುಗಡೆ ಮಾಡಲಾಗಿದ್ದು, ನಟ ಕಮ್ಯುನಿಷ್ಟ್ ಪಕ್ಷದ ಬೆಂಬಲಿಗಅ ಎನ್ನುವ ಕಾರಣಕ್ಕಾಗಿ ಅವರ ಮೇಲೆ ದುರ್ಬಲ ಸೆಕ್ಷನ್ ಗಳನ್ನು ಹಾಕಿ ಜಾಮೀನು ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಮತ್ತು ತೃಕ್ಕಕ್ಕರ ಶಾಸಕಿ ಉಮಾ ಥಾಮಸ್ ಫೇಸ್ ಬುಕ್ ನಲ್ಲಿ ಕಿಡಿಕಾರಿದ್ದಾರೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿ ಕಾಂಗ್ರೆಸ್ ನಾಯಕಿ ಉಮಾ ಥಾಮಸ್ ಅವರು ನಟನ ವಿರುದ್ಧ ದುರ್ಬಲ ಸೆಕ್ಷನ್ ಗಳನ್ನು ಹಾಕಲಾಗಿದೆ ಮತ್ತು ಅವರ ಕೆಟ್ಟ ನಡವಳಿಕೆ ಮತ್ತು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

‘ಕ್ಲಿಫ್ ಹೌಸ್‌’ನ ಸೂಚನೆಗಳ ಪ್ರಕಾರ ಪ್ರಶಸ್ತಿ ವಿಜೇತ ನಟನನ್ನು ಬಿಡುಗಡೆ ಮಾಡಲಾಗಿದೆಯೇ ಎಂದು ತಾನು ತಿಳಿಯಬಯಸುವುದಾಗಿ ಥಾಮಸ್ ಹೇಳಿದ್ದಾರೆ. ನಟನ ಹಠಾತ್ ಬಿಡುಗಡೆಯು “ಒಬ್ಬ ಕಾಮ್ರೇಡಿಗಿರುವ ಸವಲತ್ತೇ” ಎಂದು ಅವರು ಪ್ರಶ್ನಿಸಿದ್ದಾರೆ. ಈ ಕಾಯಿದೆಯು ಘನತೆಯಿಂದ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳ ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದಿದ್ದಾರೆ.

ಆದಾಗ್ಯೂ, ಕೊಚ್ಚಿ ಡಿಸಿಪಿ ಶಶಿಧರನ್ ಆರೋಪಗಳನ್ನು ತಿರಸ್ಕರಿಸಿದ್ದು, ಪೊಲೀಸರು ಯಾವುದೇ ರೀತಿಯ ಪ್ರಭಾವಕ್ಕೆ ಮಣಿಯುವುದಿಲ್ಲ ಮತ್ತು ವಿನಾಯಕನ್‌ಗೆ ಮೂರು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾದ ಸೆಕ್ಷನ್‌ಗಳನ್ನು ವಿಧಿಸಲಾಗಿದೆ ಎಂದು ಹೇಳಿರುವುದಾಗಿ ದ ನ್ಯೂ ಇಂಡಿಯನ್ ಎಕ್ಪ್ರೆಸ್ ವರದಿ ಮಾಡಿದೆ.

ಯಾರ ವಿರುದ್ಧವೂ ಕ್ರಿಮಿನಲ್ ಆರೋಪವಿದ್ದರೆ ಮಾತ್ರ ಜಾಮೀನು ರಹಿತ ಸೆಕ್ಷನ್ ಇರುತ್ತದೆ ಎಂದು ಡಿಸಿಪಿ ಹೇಳಿದ್ದು, ಘಟನೆಯ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಲಾಗುವುದು ಎಂದಿದ್ದಾರೆ.

ಕುಡಿದ ಮತ್ತಿನಲ್ಲಿ ಠಾಣೆಯಲ್ಲಿ ಗಲಾಟೆ ಮಾಡಿದ ನಂತರ ಅಗತ್ಯ ವೈದ್ಯಕೀಯ ಪರೀಕ್ಷೆಗಾಗಿ ನಟನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ, ಸರಿಯಾದ ಕಾರ್ಯವಿಧಾನದ ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

ಘಟನೆಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ವಿನಾಯಕನ್ ಪೊಲೀಸರು ತನ್ನನ್ನು ಬಂಧಿಸಿದ್ದೇಕೆ ಎನ್ನುವ ಬಗ್ಗೆ ತನಗೆ ತಿಳಿದಿಲ್ಲ ಎಂದಿದ್ದಾರೆ.