ತಿರುವನಂತಪುರಂ: ರೋಟವೈರಸ್‌ನಂತೆಯೇ ಅತಿಸಾರವನ್ನು ಉಂಟುಮಾಡುವ ನೊರೊವೈರಸ್ ಸೋಂಕು ಇಲ್ಲಿನ ಇಬ್ಬರು ಮಕ್ಕಳಲ್ಲಿ ದೃಢಪಟ್ಟಿದೆ ಎಂದು ಕೇರಳ ಸರ್ಕಾರ ಭಾನುವಾರ ತಿಳಿಸಿದೆ.
ಆರೋಗ್ಯ ಇಲಾಖೆಯು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿದ್ದು, ಕಲುಷಿತ ನೀರು ಮತ್ತು ಆಹಾರದ ಮೂಲಕ ವೈರಸ್ ಹರಡುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಈ ರೋಗವು ಹೆಚ್ಚು ಸಾಂಕ್ರಾಮಿಕವಾಗಿದ್ದು, ಜನರು ನೈರ್ಮಲ್ಯವನ್ನು ಕಾಪಾಡಿಕೊಳ್ಳುವಂತೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಒತ್ತಾಯಿಸಿದ್ದಾರೆ. ಇಬ್ಬರು ಮಕ್ಕಳಲ್ಲಿ ನೊರೊವೈರಸ್ ಸೋಂಕು ಪತ್ತೆಯಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ, ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ ಆದರೆ ಎಲ್ಲರೂ ಜಾಗರೂಕರಾಗಿರಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಚಿವೆ ಹೇಳಿದ್ದಾರೆ.
ವಿದ್ಯಾರ್ಥಿಗಳು ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟ ಸೇವಿಸಿದ ನಂತರ ಫುಡ್ ಪಾಯಿಸನಿಂಗ್ ಆಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಫುಡ್ ಪಾಯಿಸನಿಂಗ್ ಆಗಿರುವ ವಿದ್ಯಾರ್ಥಿಗಳ ಮಾದರಿಗಳನ್ನು ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನಂತರ ಸೋಂಕು ಪತ್ತೆಯಾಗಿದೆ.
ನೊರೊವೈರಸ್ ಕಲುಷಿತ ಆಹಾರ, ನೀರು ಮತ್ತು ಕೊಳಕು ಮೇಲ್ಮೈಗಳ ಮೂಲಕ ಹರಡಬಹುದು. ರೋಗ ಲಕ್ಷಣಗಳು ವಾಂತಿ ಮತ್ತು/ಅಥವಾ ಅತಿಸಾರ, ತಲೆನೋವು ಮತ್ತು ದೇಹದ ನೋವುಗಳನ್ನು ಒಳಗೊಂಡಿರುತ್ತದೆ. ವಿಪರೀತ ಸಂದರ್ಭಗಳಲ್ಲಿ, ದೇಹ ದ್ರವ ನಷ್ಟ ಸಂಭವಿಸಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಜನರು ಶೌಚಾಲಯವನ್ನು ಬಳಸಿದ ನಂತರ ಸಾಬೂನಿನಿಂದ ಪದೇ ಪದೇ ಕೈಗಳನ್ನು ತೊಳೆಯುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆಯು ಒತ್ತಾಯಿಸಿದೆ.