ತಿರುವನಂತಪುರಂ: ಉತ್ತರ ಪ್ರದೇಶ ಸಹಿತ ವಿವಿಧ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ರೂಪಿಸಲು ಚಿಂತನೆ ನಡೆಸುತ್ತಿದ್ದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಕೇರಳದ ಕ್ಯಾಥೋಲಿಕ್ ಚರ್ಚ್ ಯೋಜನೆಯೊಂದನ್ನು ಘೋಷಣೆ ಮಾಡಿದೆ.
ಕೇರಳ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಮುದಾಯದಲ್ಲಿ ಜನನ ಪ್ರಮಾಣ ಶೇ.14ಕ್ಕಿಂತ ಕಡಿಮೆಯಾಗಿದೆ. ಆದ್ದರಿಂದ ಐದು ಅಥವಾ ಐದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದ ಕುಟುಂಬಕ್ಕೆ ಅಗತ್ಯವಿರುವ ವಿಶೇಷ ಸೌಲಭ್ಯಗಳನ್ನು ಏರ್ಪಡಿಸುವುದಾಗಿ ಕೇರಳದ ಕ್ಯಾಥೋಲಿಕ್ ಚರ್ಚ್ ಹೇಳಿಕೆ ನೀಡಿದೆ.
ಸಿರೋ-ಮಲಬಾರ್ ಚರ್ಚ್ ಅಡಿಯಲ್ಲಿ ಬರುವ ಪಾಲಾ ಡಯಾಸಿಸ್ನ ಕುಟುಂಬಗಳಿಗೆ ವಿಶೇಷ ಯೋಜನೆ ಸೌಲಭ್ಯಗಳನ್ನು ನೀಡುವುದಾಗಿ ಚರ್ಚ್ ಹೇಳಿದೆ. 2000 ಇಸವಿಯ ಬಳಿಕ ಮದುವೆಯಾಗಿ ಐದು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದ ಪೋಷಕರಿಗೆ ಪ್ರತಿ ತಿಂಗಳು 1,500 ರೂಪಾಯಿ ನಗದು, ಮಹಿಳೆಯರ 4ನೇ ಹೆರಿಗೆ ಬಳಿಕ ಚರ್ಚ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಹಾಗೂ ಚರ್ಚ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಕಾಲರ್ಶಿಪ್ ನೀಡುವುದಾಗಿ ಚರ್ಚ್ ಪ್ರಚಾರ ಮಾಡುತ್ತಿದೆ.
ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಫ್ರಾ. ಫ್ಯಾಮಿಲಿ ಅಪೋಸ್ಟೊಲೇಟ್ ನಿರ್ದೇಶಕ ಜೋಸೆಫ್ ಕುಟ್ಟಿಯಾಂಕಲ್, ವಿಶೇಷವಾಗಿ ಕೋವಿಡ್-19ರ ನಂತರದ ಸನ್ನಿವೇಶದಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗಿತ್ತು. ಅದು ದೊಡ್ಡ ಕುಟುಂಬಗಳಿಗೆ ಸಹಾಯವಾಗಲು ಯೋಜನೆ ಜಾರಿ ಮಾಡಲಾಗುತ್ತಿದೆ. ಎಷ್ಟು ಕುಟುಂಬಗಳಿಗೆ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂಬ ಬಗ್ಗೆ ಇನ್ನಷ್ಟೇ ಫೈನಲ್ ಮಾಡಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೇರಳ ಸರ್ಕಾರ 2011ರಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನ ಪಡೆದರೇ ದಂಡವನ್ನು ವಿಧಿಸಲು ಮುಂದಾಗಿತ್ತು. ಆದರೆ ಈ ವೇಳೆ ವಿವಿಧ ಕ್ಯಾಥೋಲಿಕ್ ಚರ್ಚ್ ಸೇರಿದಂತೆ ವಿವಿಧ ಸಂಘಟನೆಗಳು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದವು. ಕೇರಳ ರಾಜ್ಯ ರಚನೆಯಾದ ಸಂದರ್ಭದಲ್ಲಿ ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯ ಶೇ.18.38 ರಷ್ಟೊಂದಿಗೆ ಎರಡನೇ ಅತಿ ದೊಡ್ಡ ಸಮುದಾಯವಾಗಿತ್ತು.