ಕೇರಳ ಕ್ರೈಸ್ತ ಪ್ರಾರ್ಥನಾ ಸಭೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ: ಟಿಫಿನ್ ಬಾಕ್ಸ್ ನಲ್ಲಿ ಐಇಡಿ ಬಳಸಿ ಸ್ಪೋಟ; ಕೊಚ್ಚಿ ವ್ಯಕ್ತಿಯೊಬ್ಬನಿಂದ ಕೃತ್ಯ

ಎರ್ನಾಕುಲಂ: ಇಲ್ಲಿನ ಕಲಮಸ್ಸೇರಿಯ ಕನ್ವೆಂಷನ್ ಸೆಂಟರಿನಲ್ಲಿ ಕ್ರೈಸ್ತರ ಯಹೋವನ ಸಾಕ್ಷಿ ಪ್ರಾರ್ಥನಾ ಸಭೆಯಲ್ಲಿ ಭಾನುವಾರದಂದು ಸರಣಿ ಸ್ಪೋಟವು ದೇಶವನ್ನೇ ಬೆಚ್ಚಿ ಬೀಳಿಸಿದೆ.

ಸ್ಫೋಟದಲ್ಲಿ ಗಾಯಗೊಂಡ 50 ಜನರ ಪೈಕಿ 12 ವರ್ಷದ ಬಾಲಕಿಯೊಬ್ಬಳು ಕಲಮಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಕೇರಳದ ಎರ್ನಾಕುಲಂ ಜಿಲ್ಲೆಯ ಲಿಬಿನಾ ಎಂಬ ಬಾಲಕಿಯ ದೇಹದಲ್ಲಿ ಶೇಕಡ 95 ರಷ್ಟು ತೀವ್ರ ಸುಟ್ಟಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ಸಪೋರ್ಟ್ ನಲ್ಲಿ ಇರಿಸಲಾಗಿತ್ತು. ಇದಕ್ಕೂ ಮುನ್ನ ಇಬ್ಬರು ಮಹಿಳೆಯರು ಮೃತಪಟ್ಟಿದ್ದರು.

ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳನು ಬಳಸಲಾಗಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಸ್ಫೋಟಕಗಳನ್ನು ಟಿಫಿನ್ ಬಾಕ್ಸ್‌ನಲ್ಲಿ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಲಿದ್ದು, ಇದು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪರಿಣತಿ ಪಡೆದಿದೆ. ಸಂಸ್ಥೆಯ ಫೊರೆನ್ಸಿಕ್ ತಂಡ ಭಾನುವಾರ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಏತನ್ಮಧ್ಯೆ ಕೊಚ್ಚಿಯ ವ್ಯಕ್ತಿಯೊಬ್ಬ ಸ್ಫೋಟದ ಹೊಣೆ ಹೊತ್ತು ಕೇರಳ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಮಾರ್ಟಿನ್ ಡೊಮಿನಿಕ್ ಎನ್ನುವ ವ್ಯಕ್ತಿಯೇ ಈ ಸ್ಪೋಟಗಳ ಹಿಂದಿರುವುದಾಗಿ ತನಿಖಾ ತಂಡದ ಮೂಲಗಳು ತಿಳಿಸಿವೆ. ಆತನ ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಫೋನ್ ನಲ್ಲಿ ಈ ಬಗ್ಗೆ ಪುರಾವೆಗಳು ದೊರೆತಿರುವುದಾಗಿ ಹೇಳಲಾಗಿದೆ.

ಈ ವ್ಯಕ್ತಿ ವಿವಿಧ ಕಾರಣಗಳಿಂದ ಯಹೋವನ ಸಾಕ್ಷಿ ಕ್ರೈಸ್ತರೊಂದಿಗೆ ಗಂಭೀರವಾದ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದ ಮತ್ತು ಅವರಿಗೆ ಪಾಠ ಕಲಿಸಲು ಬಯಸಿದ್ದ. ಯಹೋವನ ಸಾಕ್ಷಿಗಳು ಕ್ರೈಸ್ತ ಪಂಗಡವು ಕ್ಯಾಥೊಲಿಕ್ ಅನ್ನು ಇಷ್ಟಪಡದ ಮತ್ತು ಕ್ರಿಸ್‌ಮಸ್ ಆಚರಿಸದ ವಿಶಿಷ್ಟ ಪಂಗಡವಾಗಿದೆ. ವ್ಯಕ್ತಿಯು ಇದೇ ಪಂಗಡದವನಾಗಿದ್ದು ಕೆಲವು ವರ್ಶಗಳ ಹಿಂದೆ ಈ ಪಂಗಡವನ್ನು ತೊರೆದಿದ್ದ. ಗಲ್ಪ್ ನಲ್ಲಿ ಕೆಲಸ ಮಾಡಿದ್ದ ಈತ ಪೆಟ್ರೋಲು, ರಿಮೋಟು, ಸ್ಪೋಟಕ, ಬ್ಯಾಟರಿ ಮುಂತಾದವುಗಳನ್ನು ಬಳಸಿ ಸ್ಪೋಟಕ ತಯಾರಿಸಿದ್ದ. ಕೃತ್ಯದ ಬಗ್ಗೆ ಸಾಕ್ಷ್ಯಗಳನ್ನು ಪೊಲೀಸರಿಗೆ ಆತನೆ ನೀಡಿದ್ದಾನೆ ಎಂದು ವರದಿ ಹೇಳಿದೆ.