ಬೆಂದಕಾಳೂರೆಂಬ ಹಳ್ಳಿಯನ್ನು ನಗರವನ್ನಾಗಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ: ಪ್ರಸನ್ನ ಹೆಚ್

ಉಡುಪಿ: ಮಣ್ಣಿನ ಕೋಟೆಯಿಂದ ಕಟ್ಟಿದ ಹಳ್ಳಿ ಪ್ರದೇಶವಾಗಿದ್ದ ಬೆಂದಕಾಳೂರನ್ನು ನಗರವಾಗಿ ನಿರ್ಮಿಸಿದ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರಿಂದ, ಬೆಂಗಳೂರು ನಗರ ಇಂದು ದೇಶ-ವಿದೇಶಿಗರಿಗೆ ಚಿರಪರಿಚಿತವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಕೆಂಪೇಗೌಡರು ಶೌರ್ಯ, ಸಾಹಸ, ದೂರದೃಷ್ಠಿಗೆ ಹೆಸರಾಗಿದ್ದು, ವಿಜಯನಗರ ಅರಸರ ಒಪ್ಪಿಗೆಯೊಂದಿಗೆ ಯಲಹಂಕದಲ್ಲಿ ಜಾತ್ಯಾತೀತ ನಗರವನ್ನು ನಿರ್ಮಿಸಿದರು. ಬೆಂಗಳೂರು ನಗರವನ್ನು ಜಾತಿ ಆಧಾರಿತವನ್ನಾಗಿ ಮಾಡದೇ ವೃತ್ತಿ ಆಧಾರಿತ ಭೂಮಿಯನ್ನಾಗಿ ಮಾಡಿದರು. ಒಂದು ಕಾಲದಲ್ಲಿ ಕಾಡಿನಿಂದ ಕೂಡಿದ್ದ ಬೆಂಗಳೂರು ಪ್ರದೇಶಕ್ಕೆ ಕೋಟೆ ನಿರ್ಮಿಸಿ, ನಗರವನ್ನಾಗಿ ಮಾಡಿ, ಅದರ ಅಭಿವೃದ್ಧಿಗೆ ಕಾರಣರಾದ ನಾಡಪ್ರಭುವಿಗೆ ಗೌರವ ನೀಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು.

ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಮಾತನಾಡಿ, ಕೆಂಪೇಗೌಡರನ್ನು ಜನತೆ ಇಂದಿಗೂ ನೆನೆಯಲು ಕಾರಣ ಅವರ ವ್ಯಕ್ತಿತ್ವ ಹಾಗೂ ಅಸಾಧಾರಣ ಸಾಧನೆಯಾಗಿದೆ. ಅಂದಿನಿಂದ ಇಂದಿನವರೆಗೂ ಬೆಂಗಳೂರು ಹಂತಹಂತವಾಗಿ ಅಭಿವೃದ್ಧಿಯತ್ತ ಸಾಗುತ್ತಾ ಬಂದಿದ್ದು, ಕೆಂಪೇಗೌಡರ ಕುಟುಂಬವೂ ಕೂಡ ತ್ಯಾಗ ಬಲಿದಾನಕ್ಕೆ ಹೆಸರುವಾಸಿಯಾಗಿತ್ತು ಎಂದರು.

ಕೆಂಪೇಗೌಡರ ಜೀವನಚರಿತ್ರೆ ಮತ್ತು ಅವರ ಸಾಧನೆಗಳ ಕುರಿತು ಮಾತನಾಡಿದ ಜಿಲ್ಲಾ ಒಕ್ಕಲಿಗ ಸಮುದಾಯದ ಅಧ್ಯಕ್ಷ ಸಿದ್ಧರಾಜು, ತನ್ನನ್ನು ಬೇಟೆಯಾಡಲು ಬಂದಂತಹ ನಾಯಿಯನ್ನು ಮೊಲವೊಂದು ಧೈರ್ಯದಿಂದ ಅಟ್ಟಿಸಿಕೊಂಡು ಹೋಗಿ ಎದುರಿಸುತ್ತಿದ್ದ ದೃಶ್ಯ ಕೆಂಪೇಗೌಡರನ್ನು ವೀರಭೂಮಿ ಕಟ್ಟಲು ಪ್ರೇರೇಪಿಸಿತು ಎಂದು ಇತಿಹಾಸ ತಿಳಿಸುತ್ತದೆ. ನಾಲ್ಕೂ ದಿಕ್ಕಿನಲ್ಲೂಗಡಿ ರೇಖೆಯನ್ನು ಗುರುತಿಸಲು ಎತ್ತುಗಳಿಗೆ ನೇಗಿಲನ್ನು ಕಟ್ಟಿ ಎತ್ತುಗಳು ನಿಲ್ಲುವ ಪ್ರದೇಶವನ್ನು ಗಡಿ ಪ್ರದೇಶ ಎಂದು ನಿರ್ಧರಿಸಿ, ಅದರ ಒಳಗೆ ಬೆಂಗಳೂರು ನಗರವನ್ನು ನಿರ್ಮಿಸಿದರು ಎಂಬ ಕಥೆಗಳು ಇವೆ. ವೃತ್ತಿಗೆ ಪ್ರಾಶಸ್ತ್ಯ ನೀಡಿ, ಕೆಂಪೇಗೌಡರು ಕೋಟೆಯನ್ನು ನಿರ್ಮಿಸಿದರು. ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡರ ಸೊಸೆ ಲಕ್ಷ್ಮೀ ದೇವಿಯ ಪಾತ್ರ ಕೂಡ ಅವಿಸ್ಮರಣೀಯವಾದುದು ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಒಕ್ಕಲಿಗೆ ಸಮುದಾಯದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.