ಇದು ಉಡುಪಿ XPRESS “ಬಣ್ಣದ ಕನಸುಗಾರರು” ಸರಣಿಯ 9ನೇ ಕಂತು. ಈ ಸರಣಿಯಲ್ಲಿ ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ಈ ಸಂಚಿಕೆಯಲ್ಲಿ ಯಕ್ಷರಂಗದಲ್ಲಿ ಮತ್ತು ಭರತನಾಟ್ಯ ರಂಗದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಯುವಕಲಾವಿದೆ ಕೀರ್ತನಾ ಉದ್ಯಾವರ ಅವರ ಯಶೋಗಾಥೆ.
ಇವರು ಭರತನಾಟ್ಯದ ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದವರು. ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಭರತನಾಟ್ಯ ಮತ್ತು ಕೂಚುಪುಡಿ ರಂಗಪ್ರವೇಶ ಮಾಡಿದ ಪ್ರತಿಭಾನ್ವಿತೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಜೂನಿಯರ್ ವಿಭಾಗವನ್ನು ಪ್ರಥಮ ಶ್ರೇಣಿ ಪಡೆದು ಪೂರೈಸಿದವರು. ತೆಂಕುತಿಟ್ಟು ಯಕ್ಷಗಾನ ಮುಮ್ಮೇಳ, ಹಿಮ್ಮೇಳ ಅಭ್ಯಾಸ ಮಾಡಿದ ಕಲಾವಿದೆ. ಜೊತೆಗೆ ಯೋಗಪಟು.
ಹೀಗೆ ಬಹುವಿಧದಲ್ಲಿ ಬಣ್ಣದ ಕನಸುಗಾರರು ಎಂದು ಗುರುತಿಸಲು ಸೂಕ್ತರಾದ, ಪ್ರಶಂಸೆಗೆ ಅರ್ಹರಾದ ಇವರೇ ಕೀರ್ತನಾ ಉದ್ಯಾವರ. ಉಡುಪಿ ಸಮೀಪದ ಉದ್ಯಾವರದವರು.ಕಲಾ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಾಧನೆಯತ್ತ ಸಾಗುತ್ತಿರುವ ಕೀರ್ತನಾ ಉದ್ಯಾವರ ಕುರಿತು ಒಂದಷ್ಟು ಹೇಳ್ತೇವೆ.
ಬಾಲ್ಯದಿಂದಲೇ ಭರತನಾಟ್ಯ, ಯಕ್ಷಗಾನದ ನಂಟು:
ಕೀರ್ತನಾ ಅವರ ತಂದೆ ಮತ್ತು ತಾಯಿ ಕಲಾಪ್ರೇಮಿಗಳು. ಅದೇ ಪ್ರಭಾವವೋ ಎಂಬಂತೆ ಕೀರ್ತನಾ ಅವರಿಗೆ ಬಾಲ್ಯದಿಂದಲೇ ಭರತನಾಟ್ಯ, ಯಕ್ಷಗಾನ ಕಲೆಗಳ ಮೇಲೆ ಒಲವು ಉಂಟಾಯ್ತು. ಈ ಉತ್ಸಾಹದಿಂದ ತಮ್ಮ ಏಳನೇ ವಯಸ್ಸಿನಲ್ಲೇ ಮನೆಯ ಪಕ್ಕದ ದೇವಾಲಯದ ಸಭಾಮಂದಿರದಲ್ಲಿ ಭರತನಾಟ್ಯ ಕಲಿಕೆ ಆರಂಭಿಸಿದರು.
“ತಂದೆ, ತಾಯಿ ಯಕ್ಷಗಾನದ ಅಭಿಮಾನಿಗಳು, ಹಾಗಾಗಿ ಅವರು ಹೋಗುವ ಯಕ್ಷಗಾನ ಕಾರ್ಯಕ್ರಮಗಳಿಗೆ ಕಿರುವಯಸ್ಸಿನ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ನನಗೆ ಅರಿವಿಲ್ಲದಂತೆ ಆ ಕಲೆಯೂ ನನ್ನನ್ನು ಆವರಿಸಿತು. ಬಾಲ್ಯದಲ್ಲಿ ಅಮ್ಮನ ಸೀರೆ, ರಟ್ಟಿನಿಂದ ತಯಾರಿಸಿದ ಆಭರಣ ಧರಿಸಿ ಮನೆಯಲ್ಲಿ ಕುಣಿಯುತ್ತಿದ್ದೆ. ಈ ಆಸಕ್ತಿ ಗಮನಿಸಿ ಹೆತ್ತವರು ಯಕ್ಷಗಾನ ತರಬೇತಿಗೂ ಕಳಿಸಿಕೊಟ್ಟರು. ನಂತರ ಯಕ್ಷಗಾನವನ್ನು ಕ್ರಮಪ್ರಕಾರ ಕಲಿತೆ” ಎಂದು ತಮ್ಮ ಮತ್ತು ಯಕ್ಷಗಾನದ ನಂಟಿನ ಬಗ್ಗೆ ಹೇಳುತ್ತಾರೆ. ಹೀಗೆ ಅಂದು ಆರಂಭವಾದ ಭರತನಾಟ್ಯ ಮತ್ತು ಯಕ್ಷಗಾನದ ಕಲಿಕೆ ಇಂದು ಗಟ್ಟಿಯಾಗಿ ಬೆಳೆದು ನಿಂತಿದೆ.
ಕೀರ್ತನಾ, ಭರತನಾಟ್ಯ ಜೂನಿಯರ್ ಮತ್ತು ಸೀನಿಯರ್ ಹಂತವನ್ನು ದಿ. ರಾಧಾಕೃಷ್ಣ ತಂತ್ರಿ ಮತ್ತು ವಿ. ವೀಣಾ ಎಂ. ಸಾಮಗ ಅವರಲ್ಲಿ ಅಭ್ಯಾಸ ಮಾಡಿದ್ದಾರೆ. ಅದರ ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ. ಭರತನಾಟ್ಯ, ಕೂಚುಪುಡಿಯ ರಂಗಪ್ರವೇಶವೂ ಆಗಿದೆ. ಸದ್ಯ ವಿದ್ವತ್ ಹಂತದ ಕಲಿಕೆಯನ್ನು ವಿದುಷಿ ಲಕ್ಷ್ಮೀ ಗುರುರಾಜ್ ಅವರಿಂದ ಅಭ್ಯಾಸ ಮಾಡುತ್ತಿದ್ದಾರೆ.
ಕೀರ್ತನಾರ ಕಲಾಸಕ್ತಿಯನ್ನು ಗಮನಿಸಿದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ, ಸಾಂಸ್ಕೃತಿಕ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಉಚಿತ ಶಿಕ್ಷಣವನ್ನು ನೀಡಿದೆ. ಪ್ರಸ್ತುತ ಇವರು ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂ.ಕಾಂ. ವಿದ್ಯಾರ್ಥಿಯಾಗಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಹಲವು ಹಿರಿಯ ಗುರುಗಳ ಮಾರ್ಗದರ್ಶನವನ್ನು ಕೀರ್ತನಾ ಪಡೆದಿದ್ದಾರೆ. ದಿ. ಜಯಕುಮಾರ್, ರಾಮಕೃಷ್ಣ ನಂದಿಕೂರು, ಶೇಖರ್ ಡಿ. ಶೆಟ್ಟಿಗಾರ್, ಗಣೇಶ್ ಕೊಲೆಕಾಡಿ, ರಾಮಚಂದ್ರ ಪಾಂಗಣ್ಣ ಇವರುಗಳಲ್ಲಿ ಯಕ್ಷಗಾನದ ಪಾಠ, ಹಿಮ್ಮೇಳ, ಮುಮ್ಮೇಳ, ಛಂದಸ್ಸು ಶಾಸ್ತ್ರ ಇವುಗಳನ್ನು ಅಭ್ಯಸಿಸಿದ್ದಾರೆ.
ತಮ್ಮ ಭರತನಾಟ್ಯ ಮತ್ತು ಯಕ್ಷಗಾನ ಪ್ರದರ್ಶನಗಳ ಬಗ್ಗೆ ಹೇಳುವ ಕೀರ್ತನಾ ಅವರು, “ಕರ್ನಾಟಕ ಸೇರಿದಂತೆ ಹೊರರಾಜ್ಯಗಳಾದ ಮುಂಬೈ, ಆಂಧ್ರಪ್ರದೇಶಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದೇನೆ. ಕರ್ನಾಟಕದ ಹಲವೆಡೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದೇನೆ” ಎಂದು ನೆನಪಿಸಿಕೊಳ್ಳುತ್ತಾರೆ. ಯಕ್ಷಗಾನದಲ್ಲಿ ಕೀರ್ತನಾ, ಪುಂಡುವೇಷ ಮತ್ತು ಸಾತ್ವಿಕ ವೇಷಗಳನ್ನು ಬಲುಸುಂದರವಾಗಿ ನಿರ್ವಹಿಸಬಲ್ಲರು.
ಪ್ರತಿಭೆಗಳ ಸಾಲು :
ಇವರು ಯಕ್ಷಗಾನ ಮತ್ತು ಭರತನಾಟ್ಯದ ಕಲಾಪ್ರತಿಭೆ ಮಾತ್ರವಲ್ಲ. ಬದಲಾಗಿ ಕಲೆಗೆ ಸಮಾನವಾಗಿ ಸಾಹಿತ್ಯದ ಆಸಕ್ತಿ ಉಳ್ಳವರೂ ಹೌದು. ಕೀರ್ತನಾ ಕಥೆ, ಕವನಗಳನ್ನು ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಜೊತೆಗೆ ಉತ್ತಮ ಯೋಗಪಟುವೂ ಹೌದು.
“ನಾನೊಬ್ಬ ಭರತನಾಟ್ಯ ಕಲಾವಿದೆ ಆಗಿರುವುದರಿಂದ ನೃತ್ಯಕ್ಕೆ ಪೂರಕವಾದ ಅಂಗಶುದ್ಧಿ ಮತ್ತು ದೇಹ ಸ್ಥಿತಿಯನ್ನು ಕಾಪಿಟ್ಟುಕೊಳ್ಳುವುದು ಅತೀ ಅಗತ್ಯ. ಅದಕ್ಕಾಗಿ ಅಡವುಗಳು ಒಳಗೊಂಡಿರುವ ದೇಹಸ್ಥಾನ ಮತ್ತು ಕೆಲವು ನೃತ್ತ ಹಸ್ತಗಳನ್ನು ಉಪಯೋಗಿಸಿ ಯೋಗ ಮಾಡುತ್ತೇನೆ. ಈ ರೀತಿ ಯೋಗ ಮಾಡುವುದರಿಂದ ಅಡವು ಮಾಡುವಾಗ ಸ್ನಾಯು ಸೆಳೆತ ಉಂಟಾಗುವುದಿಲ್ಲ, ಭಂಗಿಗಳು ಚಂದವಾಗುತ್ತದೆ, ದೇಹ ಬಲ ಹಾಗೂ ಮನೋಬಲ ವರ್ಧಿಸುತ್ತದೆ” ಎಂದು ತಮ್ಮ ಯೋಗಾಭ್ಯಾಸದ ಕುರಿತಾಗಿ ಹೇಳುತ್ತಾರೆ. ಇಂತಹ ಪ್ರತಿಭಾನ್ವಿತೆ ಕೀರ್ತನಾಗೆ ‘ಕರ್ನಾಟಕ ಪ್ರತಿಭಾ ರತ್ನ’ ಪ್ರಶಸ್ತಿ ಹಾಗೂ ‘ರಾಷ್ಟ್ರೀಯ ಪ್ರತಿಭೋತ್ಸವ ಗೌರವ’ ಲಭಿಸಿದೆ.
ತಮ್ಮ ಪ್ರೋತ್ಸಾಹಕರ ಬಗೆಗೆ ಹೇಳುತ್ತಾ, “ಪೋಷಕರು, ಗುರುಗಳು, ಗೆಳೆಯರು, ಶಿಕ್ಷಣ ಸಂಸ್ಥೆ ಜೊತೆಗೆ ಇಂತಹ ಪುರಸ್ಕಾರಗಳು ಕಲೆಯ ಆಸಕ್ತಿಯನ್ನು ಉಳಿಸಿಕೊಂಡು ಮುನ್ನುಗ್ಗಲು ಸ್ಪೂರ್ತಿ” ಎನ್ನುತ್ತಾರೆ.
ಸಾಂಪ್ರದಾಯಿಕ ಶಿಕ್ಷಣ ಮುಗಿಸಿ, ಉದ್ಯೋಗ ಪಡೆದುಕೊಳ್ಳುವುದು ಸಾಮಾನ್ಯವಾಗಿ ಎಲ್ಲರಲ್ಲಿ ಇರುವ ಆಶಯ. ಆದರೆ ಒಂದು ಕಲೆಯನ್ನು ಕಲಿತು, ಅದರಲ್ಲಿ ಪಳಗಿ, ಸ್ವತಃ ಕಲಾವಿದನಾಗಿ ರೂಪುಗೊಳ್ಳಲು ಕಲೆಯೆಡೆಗೆ ಆಸಕ್ತಿ ಉಳ್ಳವರಿಂದ ಮಾತ್ರ ಸಾಧ್ಯ. ಅಂತಹ ಸಾಧನೆ ತನ್ನಿಂದ ಮತ್ತು ಯುವ ಪೀಳಿಗೆಯಿಂದ ಆಗಬೇಕು ಎಂಬುದು ಕೀರ್ತನಾ ಅವರ ಆಶಯ. ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸೋಣ.