ಈ ಬೇಸಿಗೆ ರಜೆಯಲ್ಲಿ ಮಕ್ಕಳ ಮೊಗದಲ್ಲಿ ಖುಷಿಯ ನಗು ಅರಳಿಸಿ ಪ್ಲೀಸ್! ಮಕ್ಕಳನ್ನು ಖುಷಿಯಾಗಿರಿಸಲು ನೀವೇನ್ ಮಾಡ್ಬೇಕು?

ಮತ್ತೆ ಬಂದಿದೆ ಬೇಸಿಗೆ ರಜೆ. ಬೇಸಿಗೆ ರಜೆ ಬಂದಾಗಲೆಲ್ಲಾ ಬಹುತೇಕ ಹೆತ್ತವರಿಗೆ ತಮ್ಮ‌ ಕೆಲಸಗಳ ನಡುವೆ ಮಕ್ಕಳನ್ನು ಮನೆಯಲ್ಲಿಯೇ ನೋಡಿಕೊಳ್ಳುವುದು ಹೇಗೆ ಅನ್ನುವ ಚಿಂತೆ ಮೂಡಿಯೇ ಮೂಡುತ್ತದೆ.ರಜೆ ಎನ್ನುವುದು ಮಕ್ಕಳು ರಿಲ್ಯಾಕ್ಸ್ ಆಗಿ ಖುಷಿಯಿಂದ ಕಳೆಯಲು ಇರುವ ಅದ್ಬುತ ಕ್ಷಣ.ಈ ರಜೆಯಲ್ಲಿ ಮಕ್ಕಳು ಎಂದಿಗೂ ಮರೆಯದಂತಹ ಸುಂದರ ಅನುಭವಗಳನ್ನು ತಮ್ಮದಾಗಿಸಿಕೊಂಡರೆ ಬದುಕಿನಲ್ಲಿ ಮುಂದೆಯೂ ಖುಷಿಯಾಗಿ ಬದುಕಬಲ್ಲರು. ಬನ್ನಿ ನಿಮ್ಮ ಮಕ್ಕಳನ್ನು ಈ ಬೇಸಿಗೆಯಲ್ಲಿ ಖುಷಿಯಾಗಿರಿಸಲು ನೀವೇನು ಮಾಡ್ಬೇಕು ಎನ್ನುವ ಕುರಿತು ನಾವೊಂದಷ್ಟು ಟಿಪ್ಸ್ ಕೊಡ್ತೇವೆ

ಪ್ರಕೃತಿಯ ಜೊತೆ ಕಳೆಯಲು ಬಿಡಿ:

ಹೆತ್ತವರೇ ಒಂದಷ್ಟು ಸಮಯ ಮಾಡಿಕೊಂಡು ಮಕ್ಕಳನ್ನು ಪ್ರಕೃತಿಯ ಸುಂದರ ತಾಣಗಳಿಗೆ ಕರೆದುಕೊಂಡು ಹೋಗಿ.ಪ್ರಕೃತಿಯ ಮಹತ್ವವನ್ನು ಪರಿಸರದ ಸಮ್ಮುಖದಲ್ಲಿಯೇ ಅವರಿಗೆ ತಿಳಿಸಿ.ನದಿ,ಕಡಲು,ಕೆರೆ,ಬಿಸಿಲು,ಮರಗಳ ಜೊತೆ ಒಡನಾಡಲು ಬಿಡಿ‌.ಮಕ್ಕಳ ಜೊತೆ ನೀವೂ ಬೆರೆಯಿರಿ.ಪರಿಸರದ ನಡುವೆ ಒಂದಷ್ಟು ಹೊತ್ತು ಕಳೆಯೋದ್ರಿಂದ ಪಾಸಿಟಿವ್ ಭಾವನೆಗಳು ನಮ್ಮಲ್ಲಿ ಹೆಚ್ಚುತ್ತದೆ.

ಮೊಬೈಲ್ ನಿಂದ ಒಂದಷ್ಟು ದೂರವಿರಿಸಿ:
ಮೊಬೈಲ್ ಜೊತೆ ಹೆಚ್ಚಿನ‌ ಸಮಯ‌ ಕಳೆದುಹೋಗಲು ಬಿಡಬೇಡಿ.screen time ಕಡಿಮೆಗೊಳಿಸಿ.ಅತೀಯಾಗಿ‌ ಮೊಬೈಲ್ ನೋಡುವುದರಿಂದ ಏಕಾಗ್ರತೆ ಕಡಿಮೆಯಾಗುತ್ತದೆ.ಮೊಬೈಲ್ ಬದಲಿಗೆ ಆಕಾಶದಲ್ಲಿ ನಕ್ಷತ್ರ ನೋಡುವ ಅಭ್ಯಾಸ,ಸುತ್ತಲಿನ ವಾತಾವರಣಗಳನ್ನು ಗಮನಿಸುವ ಹವ್ಯಾಸ, ಚಿತ್ರಕಲೆ,ಸಂಗೀತ ಮೊದಲಾದ ಹವ್ಯಾಸಗಳನ್ನು ಅವರಲ್ಲಿ ಬೆಳೆಸಲು ಒಳ್ಳೆಯ ವಾತಾವರಣ ಕಲ್ಪಿಸಿ. ಮಕ್ಕಳು ಮಾತ್ರವಲ್ಲ,ಮಕ್ಕಳ ಎದುರು ನೀವೂ ಮೊಬೈಲ್ ಬಳಕೆಯನ್ನು ಕಡಿಮೆಮಾಡಿರಿ.ನಿಮ್ಮನ್ನು ನೋಡಿಯೇ ಮಕ್ಕಳು ಕಲಿಯುತ್ತಾರಾದ್ದರಿಂದ ನೀವೂ ಮೊಬೈಲ್ ಬಳಕೆ ಕಡಿಮೆ ಮಾಡಿ.

ಮಕ್ಕಳಿಗೆ ಮನೆ ಕೆಲಸ ಕಲಿಸಿ:

ಮಕ್ಕಳನ್ನು ಸ್ವಾವಲಂಬಿಯಾಗಿ ಬೆಳೆಸುವುದು ಹೆತ್ತವರ ಕೆಲಸ.ಹಾಗಾಗಿ ಮಕ್ಕಳಿಗೆ ಮನೆ ಗುಡಿಸುವುದು,ಒರೆಸುವುದು, ಸಾಮಾನ್ಯ ಅಡಿಗೆಯ ಸಂಗತಿ ಸೇರಿದಂತೆ ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡಲು ಮಾರ್ಗದರ್ಶನ ಮಾಡಿ.ಇದರಿಂದ ಮನೆ ಕೆಲಸಗಳನ್ನೂ ನಿಭಾಯಿಸೋದು ಎಷ್ಟು ಕಷ್ಟವಿದೆ ಎನ್ನುವ ಸತ್ಯ ಕೂಡ ಅವರಿಗೆ ಅರಿವಾಗುತ್ತದೆ. ಇಂತಹ ಕೆಲಸಗಳನ್ನು ಈಗಲೇ ಕಲಿಸಿದರೆ ಮುಂದೆ ಯಾವತ್ತೋ ಸಹಾಯವಾಗುತ್ತದೆ.ಧೈರ್ಯವೂ ಬರುತ್ತದೆ.

ಸಮಾಜದ ಜೊತೆ ಬೆರೆಯೋದನ್ನು ಈಗಲೇ ಕಲಿಸಿ:
ಬಹುತೇಕ ಮಕ್ಕಳು ಮೊಬೈಲ್ ನಲ್ಲೇ ಮುಳುಗೆದ್ದು ಕೆಲವೊಂದು ಸಾಮಾನ್ಯ ಜ್ಞಾನಗಳಿಂದಲೇ ವಂಚಿತರಾಗುತ್ತಿದ್ದಾರೆ. ತಮ್ಮ ಊರು,ಪರಿಸರ,ಪ್ರವಾಸಿ ತಾಣಗಳು,ತಮ್ಮೂರಿನ ವಿಶೇಷತೆಗಳ ಬಗ್ಗೆಯೇ ಅವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ.

ಸಾಂಸ್ಕೃತಿಕ ಕ್ಷೇತ್ರಗಳತ್ತ ಗಮನಹರಿಸುವಂತೆ ಮಾಡಿ:
ಶಿಕ್ಷಣ ಮಾತ್ರವಲ್ಲ ಸಾಹಿತ್ಯ ಸಂಗೀತ ಜನಪದ ಕಲೆ, ನಾಟ್ಯ,ರಂಗಭೂಮಿ ಕ್ಷೇತ್ರವೂ ಕೂಡ ಮಕ್ಕಳ ಮನಸ್ಸನ್ನು ಅರಳಿಸುತ್ತೆ ಹಾಗಾಗಿ ಈ ಕ್ಷೇತ್ರಗಳ ಏನೇ ಕಾರ್ಯಕ್ರಮಗಳಾದರೂ ಮಕ್ಕಳಿಗೆ ಅವುಗಳನ್ನು ಆಸ್ವಾದಿಸುವಂತೆ ಪ್ರೇರೇಪಿಸಿರಿ.

ಹಿರಿಯರ ಪರಿಚಯ ಮಾಡಿಸಿ:
ನಿಮಗಿಂತಲೂ ನಿಮ್ಮ ಸುತ್ತಮುತ್ತಲಿರುವ,ಕುಟುಂಬದಲ್ಲಿರುವ. ಹಿರಿಯ ವ್ಯಕ್ತಿಗಳು ಹೆಚ್ಚಿನ ಜೀವನಾನುಭವ ಪಡೆದಿರುತ್ತಾರೆ ಹಾಗಾಗಿ ನಿಮ್ಮ ಮಕ್ಕಳಿಗೆ ಅಂತಹ ಒಳ್ಳೆಯ ಹಿರಿಯ ಜೀವಗಳ ಪರಿಚಯ ಮಾಡಿಸಿ.ಹಳೆ ಬೇರು ಹೊಸ ಚಿಗುರು ಎನ್ನುವಂತೆ ಹಳೆ ಬೇರಿನಿಂದಲೂ ಮಕ್ಕಳು ಕಲಿಯೋದು, ಖುಷಿ ಪಡುವುದು ಸಾಕಷ್ಟಿದೆ. ಇಷ್ಟು ಮಾತ್ರವಲ್ಲ ಮ್ಯಾನುವಲ್ ಆಟಗಳು,ಕಂಪ್ಯೂಟರ್, ಮೊಬೈಲ್ ಬಳಕೆ ಇಲ್ಲದೇ ಆಡುವ ಆಟಗಳನ್ನು ಹೇಳಿಕೊಡಿ.ಅಥವಾ ಈ ರೀತಿ ಆಟ ಆಡುವವರ ಜೊತೆ ಮಕ್ಕಳನ್ನು ಬೆರೆಯಲು ಪ್ರೇರೇಪಿಸಿ. ಹೀಗೆ ಈ ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಕ್ರಿಯಾಶೀಲರನ್ನಾಗಿ ಮಾಡುವ ಗುರಿ ಹಾಕಿದರೆ ಖಂಡಿತವಾಗಲೂ ಮಕ್ಕಳ ಮೊಗದಲ್ಲಿ ಖುಷಿ ಅರಳುತ್ತದೆ.ಟ್ರೈ ಮಾಡಿ ಪ್ಲೀಸ್.