ಕೆಡಿಪಿ ಸಭೆಗೆ ಎಲ್ಲಾ ಇಲಾಖಾಧಿಕಾರಿಗಳು ಬರಲೇಬೇಕು: ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಎಚ್ಚರಿಕೆ

ಕುಂದಾಪುರ: ಕೆಡಿಪಿ ಸಭೆ ನಡೆಸುವುದು ಕಾಟಾಚಾರಕ್ಕೆ ಅಲ್ಲ. ಎಲ್ಲಾ ಅಧಿಕಾರಿಗಳು ಹಾಜರಾಗದಿದ್ದರೆ ಕ್ರಮ ತೆಗೆದುಕೊಳ್ಳಬೇಕು. ಬಡವರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಅಸಡ್ಡೆ ತೋರಿದರೆ ನಾನು ಸುಮ್ಮನಿರೋದಿಲ್ಲ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಅವರು ಶುಕ್ರವಾರ ಕುಂದಾಪುರ ತಾಲೂಕು ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಾತಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ವನ್ಯಜೀವಿಗಳ ರಕ್ಷಣೆ ಬಗ್ಗೆ ವೈಲ್ಡ್‌ಲೈಫ್ ಅಧಿಕಾರಿಗಳು ನಿಗಾ ಇಡಬೇಕು. ಕಾಟಾಚಾರಕ್ಕೆ ಅರಣ್ಯ ಸಪ್ತಾಹ ಮಾಡುವುದಲ್ಲ. ಬದಲಾಗಿ ನಾಗರಿಕರಿಗೆ ಪರಿಸರ, ವನ್ಯ ಜೀವಿಗಳ ಉಳಿವು ಎಷ್ಟು ಮುಖ್ಯ ಎನ್ನುವ ಬಗ್ಗೆ ಜಾಗೃತಿ ಮೂಡಿಸಬೇಕು. ಅರಣ್ಯ ಒತ್ತುವರಿ, ಮರಗಳ್ಳರು, ರಕ್ಷಿತಾರಣ್ಯ ಒತ್ತುವರಿ ಹಾಗೂ ಗಾಂಜಾ ಬೆಳೆಯುವವರ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಸುಕುಮಾರ್ ಶೆಟ್ಟಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಪಂ ಸದಸ್ಯೆ ಜ್ಯೋತಿ ಎಂ. ಮಾತನಾಡಿ, ಹಟ್ಟಿಯಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರು ಇಲ್ಲದಿರುವ ಬಗ್ಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮೀಣ ಭಾಗದ ಆಸ್ಪತ್ರೆಯಲ್ಲಿ ವೈದ್ಯರಿಲ್ಲದಿರುವುದರಿಂದ ಬಡವರಿಗೆ ಸಮಸ್ಯೆಯಾಗುತ್ತಿದ್ದು, ಆಸ್ಪತ್ರೆಗೆ ಖಾಯಂ ವೈದ್ಯರ ನೇಮಿಸುವಂತೆ ಅವರು ಒತ್ತಾಯಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಪ್ರತಿಕ್ರಿಯಿಸಿ, ಹಟ್ಟಿಯಂಗಡಿ ಆಸ್ಪತ್ರೆಗೆ ಖಾಯಂ ವೈದ್ಯರಿದ್ದು, ಗಂಗೊಳ್ಳಿ ಹಾಗೂ ಕೊಲ್ಲೂರು ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಹಟ್ಟಿಯಂಗಡಿ ವೈದ್ಯರನ್ನು ನೇಮಿಸಲಾಗಿದೆ. ಹಟ್ಟಿಯಂಗಡಿ ಭಾಗದ ಜನರಿಗೆ ಸಮಸ್ಯೆಗಾಗುತ್ತಿರುವುದನ್ನು ಮನಗಂಡು ವಾರದಲ್ಲಿ ಎರಡು ದಿನ ಗಂಗೊಳ್ಳಿ ಮಾತ್ರ ನೋಡಿಕೊಳ್ಳಲು ವೈದ್ಯರಿಗೆ ಸೂಚಿಸಲಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಗೆ ವೈದ್ಯರ ನೇಮಕ ಮಾಡಲು ಈಗಾಗಲೇ ಸರ್ಕಾರ ಮುಂದಾಗಿದೆ. ಹಟ್ಟಿಯಂಗಡಿ ಆಸ್ಪತ್ರೆ ಸಮಸ್ಯೆ ಪರಿಹಾರ ಮಾಡಲಾಗುವುದು. ಸ್ಥಳೀಯರು ಯಾರಾದರೂ ಎಂಬಿಬಿಎಸ್ ಮಾಡಿದವರು ಇದ್ದರೆ ನೇಮಕ ಮಾಡಿಕೊಳ್ಳುವಂತೆ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ತಾಲೂಕು ಆರೋಗ್ಯಾಧಿಕಾರಿಯವರಿಗೆ ಸೂಚಿಸಿದರು.

ಜಿ.ಪಂ ಸದಸ್ಯೆ ಗೌರಿ ದೇವಾಡಿಗ ಮಾತನಾಡಿ, ಕುಂದಾಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಬಡವರನ್ನು ಕೇಳುವವರೇ ಇಲ್ಲದಂತಾಗಿದೆ. ಜನಪ್ರತಿನಿಧಿಗಳಿಗೆ ಸೌಜನ್ಯಕ್ಕಾದರೂ ಗೌರವ ಕೊಡುತ್ತಿಲ್ಲ ಎಂದು ದೂರಿದರು.

ಇದಕ್ಕೆ ಧ್ವನಿಗೂಡಿಸಿದ ತಾ.ಪಂ ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ ಕುಂದಾಪುರ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಗೌರವ ಕೊಡುವ ಸೌಜನ್ಯವೂ ಇಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆ ಕೊರತೆ ಒಂದೇ ಅಲ್ಲಾ.. ಔಷಧವೂ ಸಿಗೋದಿಲ್ಲ. ತಾಲೂಕು ಪಂಚಾಯಿತಿ ಅರ್ಧ ಸಾಮಾನ್ಯ ಸಭೆ ಕೂಡಾ ತಾಲೂಕು ಆಸ್ಪತ್ರೆ ವಿಷಯದಲ್ಲೇ ಕಳೆದು ಹೋಗುತ್ತಿದೆ ಎಂದರು.

ರಾಜೀನಾಮೆ ನೀಡಿ ತೆರಳಿ: ಶಾಸಕ ಬಿಎಮ್‌ಎಸ್:
ಶಾಸಕ ಸುಕುಮಾರ್ ಶೆಟ್ಟಿ ವೈದ್ಯಾಧಿಕಾರಿ ಡಾ. ರಾಬರ್ಟ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸರ್ಕಾರಿ ಆಸ್ಪತ್ರೆಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿವೆ. ಆಸ್ಪತ್ರೆಯಲ್ಲಿರುವ ಸಮಸ್ಯೆಗಳನ್ನು ನಿಭಾಯಿಸುವುದು ವೈಧ್ಯಾಧಿಕಾರಿಯಾದವರ ಕರ್ತವ್ಯ. ವೈದ್ಯಾಧಿಕಾರಿ ಜವಾಬ್ದಾರಿ ನಿಭಾಯಿಸಲಾಗದಿದ್ದರೆ ರಾಜೀನಾಮೆ ನೀಡಿ ತೆರಳಿ ಎಂದು ಶಾಸಕ ಬಿಎಮ್‌ಎಸ್ ಗುಡುಗಿದರು.

ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಪುತ್ರನ್, ನಾಮ ನಿರ್ದೇಶಕ ಸದಸ್ಯೆ ರೂಪಾ ಪೈ, ತಾ.ಪಂ ಪ್ರಭಾರ ಇಒ ಡಾ.ನಾಗಭೂಷಣ ಉಡುಪ ಇದ್ದರು.