ಮೈತ್ರಿ ಪಕ್ಷದ ಅಭ್ಯರ್ಥಿಗಳ ಮೇಲೆ ಮಾನಸಿಕ ಒತ್ತಡ ತರಬೇಕು ಎನ್ನುವ ಕಾರಣಕ್ಕಾಗಿ ಬಿಜೆಪಿ ಸರ್ಕಾರ ನಿರಂತರವಾಗಿ ಐಟಿ ದಾಳಿಯನ್ನು ಸಂಘಟಿಸುತ್ತಿದೆ: ಎಚ್.ಡಿ.ಕುಮಾರಸ್ವಾಮಿ

ಕುಂದಾಪುರ: ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ನಮ್ಮ ಕುಟುಂಬ ಸದಸ್ಯರು ಹಾಗೂ ಮೈತ್ರಿ ಪಕ್ಷದ ಅಭ್ಯರ್ಥಿಗಳ ಮೇಲೆ ಮಾನಸಿಕ ಒತ್ತಡ ತರಬೇಕು ಎನ್ನುವ ಕಾರಣಕ್ಕಾಗಿ ಬಿಜೆಪಿ ಸರ್ಕಾರ ನಿರಂತರವಾಗಿ ಐಟಿ ದಾಳಿಯನ್ನು ಸಂಘಟಿಸುತ್ತಿದೆ. ಇಂತಹ ವ್ಯವಸ್ಥಿತ ದಾಳಿಯಿಂದ ಯಾವುದೆ ರೀತಿಯಿಂದಲೂ ನಾವು ಆತಂಕಕ್ಕೆ ಒಳಗಾಗಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಇಲ್ಲಿನ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸೌಕೂರು ಬೀದಿ ಮನೆಯ ಜ್ಯೋತಿಷಿ ಸೊಕ್ಕೊಟ್ಟು ಮಂಜುನಾಥಯ್ಯ (ಹೆಬ್ಬಾರ್) ಅವರ ಮನೆಗೆ ಭೇಟಿ ನೀಡಿದ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವ ಇಲಾಖೆಗಳನ್ನು ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡು ನಮ್ಮನ್ನು ದೃತಿಗೆಡಿಸುವ ಯಾವ ಪ್ರಯತ್ನಗಳು ಯಶಸ್ಸು ಕಾಣೋದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಐಟಿ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದರು.

ಹೆಲಿಕ್ಯಾಪ್ಟರ್ ದೊರಕುತ್ತಿಲ್ಲ, ಕೇಂದ್ರದ ವಿರುದ್ದ ಸಿಎಂ ಕಿಡಿ:
ಕಳೆದ ಒಂದು ತಿಂಗಳಿಂದ ಚುನಾವಣಾ ಕಾರ್ಯಗಳಿಗಾಗಿ ಹೆಲಿಕ್ಯಾಪ್ಟರ್‍ಬಳಕೆಗೆ ಅನುಮತಿಯನ್ನು ಕೇಳುತ್ತಿದ್ದರೂ ವಿಪಕ್ಷದ ನಾಯಕರುಗಳಿಗೆ ಹೆಲಿಕ್ಯಾಪ್ಟರ್ ದೊರಕುತ್ತಿಲ್ಲ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಆಂಧ್ರ ಪ್ರದೇಶದಲ್ಲಿಯೂ ಇದೇ ಪರಿಸ್ಥಿತಿ ಇದೆ. ಕೇಂದ್ರದ ಇಲಾಖೆಗಳನ್ನು ಬಳಸಿಕೊಂಡು ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ವಿಪಕ್ಷವನ್ನು ಮಣಿಸಬಹುದು ಎನ್ನುವ ಬಿಜೆಪಿ ಪಕ್ಷಕ್ಕೆ ಕಾಲವೇ ಉತ್ತರ ನೀಡಲಿದೆ.

ಕೆಲವೇ ಎಲೆಕ್ಟ್ರಾನಿಕ್ಸ್ ಮಾಧ್ಯಮಗಳ ವೈಭೀಕರಣದಿಂದಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹೈ ವೋಲ್ಟೇಜ್ ಚುನಾವಣೆ ಎಂದು ಬಿಂಬಿಸಲಾಗುತ್ತಿದೆ. ಚಿತ್ರ ನಟರ ಉಪಸ್ಥಿತಿಗಳಿಗೆ ವಿಪರೀತ ಪ್ರಚಾರ ನೀಡಲಾಗುತ್ತಿದೆ. ಆದರೆ ಅಲ್ಲಿನ ವಾಸ್ತವ ಸ್ಥಿತಿ ಬೇರೆ ಇದೆ. ಜನ ಪ್ರತಿ ಬಾರಿಯ ಚುನಾವಣೆಯಂತೆ ಈ ಬಾರಿಯ ಚುನಾವಣೆಯನ್ನು ನೋಡುತ್ತಿದ್ದಾರೆ. ಮಂಡ್ಯ, ಹಾಸನ, ತುಮಕೂರು ಸೇರಿದಂತೆ ಜೆಡಿಎಸ್‍ಅಭ್ಯರ್ಥಿಗಳು ಸ್ಪರ್ಧಿಸುವ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳ ಕುರಿತು ಒಲವು ಹೆಚ್ಚುತ್ತಿರುವುದರಿಂದ ಬಿಜೆಪಿ ವಾಮಮಾರ್ಗದಿಂದ ಚುನಾವಣೆ ಗೆಲ್ಲುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಸೌಕೂರು ಭೇಟಿಯ ವಿಶೇಷತೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಸಿಎಂ ಕುಮಾರಸ್ವಾಮಿ, 1985 ರಲ್ಲಿ ತಂದೆ ಎಚ್.ಡಿ.ದೇವೇಗೌಡರು ಸೌಕೂರಿನ ಸೊಕ್ಕೊಟ್ಟು ಮಂಜುನಾಥಯ್ಯ ಅವರ ಮನೆಗೆ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅವರ ಆಶೀರ್ವಾದ ಪಡೆದುಕೊಳ್ಳಲು ಆಗಮಿಸಿದ್ದೇನೆ. ಈ ಭೇಟಿಗೆ ಯಾವುದೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇ ಗೌಡ, ಜೆಡಿಎಸ್‍ಜಿಲ್ಲಾಧ್ಯಕ್ಷ ಯೋಗೀಶ್‍ಶೆಟ್ಟಿ, ಕಿಶೋರ ಬಲ್ಲಾಳ್ ಕುಂದಾಪುರ, ಸಬ್ಲಾಡಿ ಮಂಜಯ್ಯ ಶೆಟ್ಟಿ ಇದ್ದರು.