ಕವಿತೆ ತಾನಾಗಿ ಹುಟ್ಟಿ ಹರಿಯಬೇಕು: ಎಸ್.ಕೆ ಕುಂಪಲ

 

ಉಳ್ಳಾಲ: ಕವಿತೆ ತಾನಾಗಿ ಹುಟ್ಟಿ ಹರಿಯಬೇಕು, ಇದು ಅವರವರ ಭಾವಕ್ಕೆ ಸಂಬಂಧಿಸಿದ್ದಾಗಿದೆ. ಬೆಳಕು ಭಗವಂತನ ಪ್ರತಿ ರೂಪ. ಉರಿದು ಬೆಳಕು ಕೊಡುವ ಜ್ಯೋತಿ ಬೆಂಕಿಯೂ ಆಗ ಬಲ್ಲುದು ಎಂದು ಹಿರಿಯ ಕವಿ ಎಸ್.ಕೆ. ಕುಂಪಲ ಉಳ್ಳಾಲ ತಾ. ಚು. ಸಾ. ಪರಿಷತ್ತು ದೀಪಾವಳಿಯ ಪ್ರಯುಕ್ತ ಆಯೋಜಿಸಿದ್ದ, ‘ಕಾವ್ಯ ದೀಪೋತ್ಸವ’ ಕಾರ್ಯಕ್ರಮದ ಅಂಗವಾಗಿ ನಡೆದ ಕವಿ ಗೋಷ್ಠಿಯ ಅಧ್ಯಕ್ಷ ಭಾಷಣದಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.   

ಈ ವಿಶಿಷ್ಟ ಸರಳ ಕಾರ್ಯಕ್ರಮವು ಅ 21 ರಂದು ಸಂಜೆ ಕೋಟೆ ಕಾರಿನ ಶ್ರೀ ವಿದ್ಯಾಗಣೇಶೋತ್ಸವ ಮಂಟಪದಲ್ಲಿ ನಡೆಯಿತು.

ಸುಂದರ ಆಚಾರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಫಾಟಿಸಿದರು. ವಿಜಯ ಲಕ್ಷ್ಮೀ ಕಟೀಲು ದೀಪಾವಳಿ ಹಬ್ಬದಾಚರಣೆಯ ಹಿನ್ನೆಲೆ ಮತ್ತು ಮಹತ್ತ್ವದ ಬಗ್ಗೆ ಸೋದಾಹರಣವಾಗಿ ಉಪನ್ಯಾಸ ನೀಡಿದರು.

ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಮಾತನಾಡಿ, ಬೆಳಕಿನ ಹಬ್ಬ ಮನಸ್ಸಿನ ತಮಸ್ಸನ್ನು ಕಳೆದು ನವೋಲ್ಲಾಸ ಮೂಡಿಸಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷ ಹಾಗೂ ಪರಿಷತ್ತಿನ ಜಿಲ್ಲಾಧ್ಯಕ್ಷ ಹ. ಸು. ಒಡ್ಡಂಬೆಟ್ಟು ಮಾತನಾಡಿ, ದೀಪಾವಳಿ ಹತ್ತಿರವಾಗುತ್ತಿರುವಾಗ ಈ ವಿಶಿಷ್ಟ ಕಾವ್ಯ ದೀಪೋತ್ಸವಾಚರಣೆಯು ಅಭಿನಂದನೀಯ. ಬೆಳಕಿನ ಹಬ್ಬ ತುಳುನಾಡಿನ ಮುಖ್ಯ ಹಬ್ಬಗಳಲ್ಲಿ ಒಂದಾಗಿದೆ ಎಂದರು. ಪರಿಷತ್ತಿನ ಉಳ್ಳಾಲ ತಾಲೂಕಿನ ಅಧ್ಯಕ್ಷ ಎಡ್ವರ್ಡ್ ಲೋಬೋ ಸಂದರ್ಭೋಚಿತವಾಗಿ ಮಾತನಾಡಿದರು.

ಕವಿಗೋಷ್ಠಿಯಲ್ಲಿ ಚಂದ್ರಿಕಾ ಕೈರಂಗಳ, ಉಳ್ಳಾಲ ತಾಲೂಕು ಚು. ಸಾ.ಪರಿಷತ್ತಿನ ಗೌರವಾಧ್ಯಕ್ಷರ ಗುಣಾಜೆ ರಾಮಚಂದ್ರ ಭಟ್, ವೆಂಕಟೇಶ್ ಗಟ್ಟಿ, ಕಾಂಚನಾ ಕೋಟೆಕಾರ್, ಎಡ್ವರ್ಡ್ ಲೋಬೋ, ವಲ್ಲಿ ಬೋಳ, ಮನ್ಸೂರ್ ಮುಲ್ಕಿ, ಲತೀಶ್ ಸಂಕೊಳಿಗೆ,ಗುಣವತಿ ಕಿನ್ಯ, ವಾಣಿ ಲೋಕಯ್ಯ, ಸುಮಂಗಲಾ ದಿನೇಶ್ ಶೆಟ್ಟಿ, ಅರ್ಚನಾ ಬಂಗೇರ ಸ್ವರಚಿತ ಕವನ ವಾಚಿಸಿದರು.

ವೆಂಕಟೇಶ್ ಗಟ್ಟಿ ಸ್ವಾಗತಿಸಿದರು. ವಾಣಿ ಲೋಕಯ್ಯ ವಂದಿಸಿದರು. ಯೋಗೀಶ್ ಮಲ್ಲಿಗೆ ಮಾಡು ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯ ಅತಿಥಿ ರಾಘವ ಗಟ್ಟಿ, ಯಕ್ಷಗಾನ ಕಲಾವಿದ ಸರ್ಪಂಗಳ ಈಶ್ವರ ಭಟ್, ಕವಿ ಡಾ.ಸುರೇಶ್ ನೆಗಳ ಗುಳಿ, ರೇಮಂಡ್ ಡಿ’ ಕೂನಾ ಮುಂತಾದವರು ಉಪಸ್ಥಿತರಿದ್ದರು.