ಉಡುಪಿ, ಜುಲೈ 4: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು ಮತ್ತು ಸಿಡಾಕ್, ಧಾರವಾಡ ಇವರ ಜಂಟಿ ಆಶ್ರಯದಲ್ಲಿ ಪರಿಶಿಷ್ಟ ಪಂಗಡದ ಸ್ವಉದ್ಯೋಗಾಂಕ್ಷಿಗಳಿಗೆ ಉಚಿತ ವಸತಿ ಊಟೋಪಚಾರ ಸಹಿತ 6 ದಿನಗಳ ಉದ್ಯೋಗ ಅಭಿವೃದ್ಧಿ ತರಬೇತಿ ಶಿಬಿರವನ್ನು ಮಂಗಳೂರಿನಲ್ಲಿ ಏರ್ಪಡಿಸಲಾಗಿದೆ.
ಸರಕಾರದ ವಿವಿಧ ಇಲಾಖೆಗಳಲ್ಲಿ ಸ್ವಯಂ ಉದ್ಯೋಗಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯವಿದ್ದು, ಉಳಿದ ಪರಿಶಿಷ್ಟ ಪಂಗಡದ ಸ್ವಉದ್ಯೋಗಾಂಕ್ಷಿಗಳಿಗೆ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ.
ಈ ಶಿಬಿರದಲ್ಲಿ ಸ್ವಂತ ಉದ್ಯೋಗಕ್ಕೆ ಬೇಕಾಗುವ ನಾಯಕತ್ವದ ಗುಣಗಳು, ಸರಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳ ವಿವಿಧ ಯೋಜನೆಗಳು, ಸಣ್ಣ ಮತ್ತು ಮದ್ಯಮ ಉದ್ದಿಮೆಗಳಿಗೆ ವಿವಿಧ ಕ್ಷೇತ್ರಗಳಲ್ಲಿರುವ ಅವಕಾಶಗಳು, ಜಿ.ಎಸ್.ಟಿ., ಯೋಜನಾ ವರದಿ ತಯಾರಿಕೆ, ಲೆಕ್ಕಪತ್ರ ನಿರ್ವಹಣೆ ಇತ್ಯಾದಿ ವಿಚಾರಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸಮಗ್ರ ಮಾಹಿತಿ ನೀಡಲಾಗುವುದು. ಹೆಸರು ನೋಂದಾವಣೆಗೆ ಜುಲೈ 12 ಕೊನೆಯ ದಿನ.
ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರು, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, ಅಲೆವೂರು ರಸ್ತೆ, ಶಿವಳ್ಳಿ ಕೈಗಾರಿಕಾ ವಸಾಹತು, ಮಣಿಪಾಲ, ಕಛೇರಿ ದೂರವಾಣಿ ಸಂಖ್ಯೆ: 8217530146 ಅಥವಾ 9844700937 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.