ಉಡುಪಿ, ಜೂನ್ 18: ವಿಶ್ವಬ್ಯಾಂಕ್ ನೆರವಿನಲ್ಲಿ ರಾಷ್ಟ್ರೀಯ ಚಂಡಮಾರುತ ಅಪಾಯ ತಗ್ಗಿಸುವಿಕೆ ಯೋಜನೆಯಡಿಯಲ್ಲಿ ಕಾಪುವಿನಲ್ಲಿ ನಿರ್ಮಾಣಗೊಂಡ ವಿವಿದೋದ್ದೇಶ ಚಂಡಮಾರುತ ಆಶ್ರಯ ತಾಣವನ್ನು ಕಂದಾಯ ಸಚಿವ ಆರ್.ವಿ ದೇಶ್ಪಾಂಡೆ ಅವರು ಮಂಗಳವಾರ ಉದ್ಘಾಟಿಸಿದರು.
ಕಾಪು ಪಡು ಸರಕಾರಿ ಉನ್ನತ ಪ್ರಾಥಮಿಕ ಶಾಲೆ ಆವರಣದಲ್ಲಿ ಸುಮಾರು 2.45 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಆಶ್ರಯ ತಾಣದಲ್ಲಿ ಪ್ರಾಕೃತಿಕ ವಿಕೋಪಗಳ ತುರ್ತು ಸಂದರ್ಭಗಳಲ್ಲಿ ನಿರ್ವಸಿತರಾಗುವವರಿಗೆ ಆಶ್ರಯ ಕಲ್ಪಿಸಬಹುದು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, 1999 ರಲ್ಲಿ ಒರಿಸ್ಸಾದಲ್ಲಿ ಉಂಟಾದ ಭೀಕರ ಚಂಡಮಾರುತವು ದೇಶದಲ್ಲಿ ಪ್ರಾಕೃತಿಕ ವಿಕೋಪಗಳ ನಿರ್ವಹಣೆಯನ್ನು ಹೆಚ್ಚು ಸಶಕ್ತಗೊಳಿಸಲು ಪಾಠ ಕಲಿಸಿದೆ ಎಂದರು. ರಾಜ್ಯದ ಕರಾವಳಿಯ 3 ಜಿಲ್ಲೆಗಳಲ್ಲಿ ಇಂತಹ ಆಶ್ರಯ ತಾಣಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ಇದೆ. ತುರ್ತು ಸಂದರ್ಭದಲ್ಲಿ ಈ ಆಶ್ರಯ ತಾಣಗಳನ್ನು ಸಾರ್ವಜನಿಕರ ರಕ್ಷಣೆಗೆ ಬಳಸಿಕೊಳ್ಳಲಾಗುವುದು, ಉಳಿದ ದಿನಗಳಲ್ಲಿ ಶಾಲಾ ತರಗತಿ ಕೋಣೆಗಳನ್ನಾಗಿ ಉಪಯೋಗಿಸಿಕೊಳ್ಳಲಾಗುವುದು ಎಂದು ಹೇಳಿದರು.
ಇದರೊಂದಿಗೆ ಚಂಡಮಾರುತದ ಮತ್ತು ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರ ಸ್ಥಳಾಂತರವನ್ನು ಸುಗಮಗೊಳಿಸಲು ಕರಾವಳಿಯ ತೀರ ಪ್ರದೇಶದಲ್ಲಿ ಸುಮಾರು 45 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಸಿಆರ್ಝಡ್ ವ್ಯಾಪ್ತಿಯನ್ನು ಕೇಂದ್ರ ಸರ್ಕಾರವು 200 ಮೀ.ನಿಂದ 50 ಮೀ.ಗೆ ಇಳಿಸಿದೆ. ಇದರಿಂದ ಕರಾವಳಿ ತೀರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ಅನಾನುಕೂಲ ಕಡಿಮೆಯಾಗಲಿದೆ. ಕಾಪು ತಾಲೂಕು ಕೇಂದ್ರಕ್ಕೆ ಮಿನಿ ವಿದಾನಸೌಧವನ್ನು ಮಂಜೂರು ಮಾಡಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಸಚಿವ ಆರ್. ವಿ. ದೇಶ್ಪಾಂಡೆ ತಿಳಿಸಿದರು.
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ನಳೀನಿ ಪ್ರದೀಪ್ ರಾವ್, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಮಧುಕೇಶ್ವರ್ ವಂದಿಸಿದರು.