ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ: ಆಪಾದಿತ ಗಣೇಶ್ ಶೆಟ್ಟಿ ಜಾಮೀನ್ ಅರ್ಜಿ ತಿರಸ್ಕೃತ

ಕುಂದಾಪುರ: ಇಲ್ಲಿನ ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ಆಪಾದಿತನೆಂದು ಬಂಧಿಸಲ್ಪಟ್ಟ ಮೊಳಹಳ್ಳಿ ಗಣೇಶ್ ಶೆಟ್ಟಿಯ ಜಾಮೀನು ಅರ್ಜಿಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಬಹುಕೋಟಿ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಆರೋಪಿತ ವ್ಯಕ್ತಿಯು ಕಟ್ಟೆ ಭೋಜಣ್ಣವರ ಜೊತೆ ಹಣಕಾಸು ವ್ಯವಹಾರ ಹೊಂದಿದ್ದನೆನ್ನಲಾಗಿದೆ. ಮೃತ ವ್ಯಕ್ತಿಯು ತಮ್ಮ ಡೆತ್ ನೋಟಿನಲ್ಲಿ ಒಟ್ಟು ಒಂಭತ್ತು ರೂಪಾಯಿ ಕೋಟಿಗಳಷ್ಟು ಸಾಲ ಬಾಕಿ ಇರುವ ಬಗ್ಗೆ ಬರೆದುಕೊಂಡಿದ್ದರು ಮತ್ತು ಈ ಕಾರಣಕ್ಕಾಗಿಯೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದರು.

ಮೃತರು ಪೋಲೀಸ್ ಠಾಣೆಯ ಎಸ್ ಎಚ್ ಒ ನನ್ನು ಪ್ರಸ್ತಾಪಿಸಿ ಪತ್ರ ಬರೆದದ್ದರಿಂದ ಆರೋಪಿಗೆ ಜಾಮೀನು ನೀಡಬಾರದೆಂದು ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದಾರೆ. ಪ್ರಾಸಿಕ್ಯೂಶನ್ ಮಂಡಿಸಿದ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್, ಆರೋಪಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಪ್ರಕರಣದ ಇನ್ನೋರ್ವ ಆರೋಪಿ ಎಚ್. ಇಸ್ಮಾಯಿಲ್ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನಿಗಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.