ಉಡುಪಿ: ಕಟಪಾಡಿ- ಶಿರ್ವ ರಾಜ್ಯ ಹೆದ್ದಾರಿಯ ಶಂಕರಪುರ ಹೃದಯಭಾಗದಲ್ಲಿ ಕೇಬಲ್ ಅಳವಡಿಸಲು ಅಗೆದಿರುವ ಗುಂಡಿಯು ಮೃತ್ಯು ಕೂಪವಾಗಿ ಪರಿಣಮಿಸಿದೆ.
ಶಂಕರಪುರ ಬಸ್ ನಿಲ್ದಾಣದ ಸಮೀಪ ಕೇಬಲ್ ಅಳವಡಿಸುವ ಸಲುವಾಗಿ ಬೃಹತ್ ಗುಂಡಿಯನ್ನು ತೆಗೆದಿದ್ದು, ಅದನ್ನು ಮುಚ್ಚದೆ ಬಿಟ್ಟುಹೋಗಿದ್ದಾರೆ. ಇದೀಗ ಈ ಗುಂಡಿಯು ಅಪಾಯವನ್ನು ಆಹ್ವಾನಿಸುತ್ತಿದೆ. ಈಗಾಗಲೇ ಮಳೆ ಕೂಡ ಆರಂಭವಾಗಿದ್ದು, ಗುಂಡಿಯಲ್ಲಿ ಮಳೆ ನೀರು ನಿಂತು ಸಾವು ನೋವು ಸಂಭವಿಸುವ ಸಾಧ್ಯತೆ ಇದೆ.
ಕಟಪಾಡಿ- ಶಿರ್ವ ರಾಜ್ಯ ಹೆದ್ದಾರಿ ಹೊಸದಾಗಿ ಡಾಂಬರೀಕರಣ ಆಗಿ ತಿಂಗಳೆ ಕಳೆದಿಲ್ಲ. ಅಷ್ಟರೊಳಗೆ ಕೇಬಲ್ ಅಳವಡಿಕೆಗಾಗಿ ಗುಂಡಿ ಅಗೆದಿದ್ದಾರೆ. ಕಾಮಗಾರಿ ಮುಗಿದ ಬಳಿಕ ಗುಂಡಿಯನ್ನು ಮುಚ್ಚದೆ ಹಾಗೆಯೆ ಬಿಟ್ಟಿದ್ದು, ಇದು ಮಳೆಗಾಲದಲ್ಲಿ ಕುಸಿದು ರಸ್ತೆಯು ಹಾಳಾಗುವ ಸಾಧ್ಯತೆ ಇದೆ. ಹಾಗಾಗಿ ಸಂಬಂಧಪಟ್ಟವರು ಕೂಡಲೇ ಗುಂಡಿಯನ್ನು ಮುಚ್ಚಿ ಮುಂದೆ ನಡೆಯಬಹುದಾದ ಅನಾಹುತವನ್ನು ತಪ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.












