ಮಂಗಳೂರು: ಖ್ಯಾತ ಯಕ್ಷಗಾನ ಕಲಾವಿದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರನ್ನು ಕಟೀಲು ಮೇಳದಿಂದ ಏಕಾಏಕಿ ಕೈ ಬಿಡಲಾಗಿದೆ.
ಶುಕ್ರವಾರ ಕಟೀಲು ದೇವಸ್ಥಾನದ ಯಕ್ಷಗಾನದ ಮೇಳದ ಆರು ಮೇಳದ ಮೊದಲ ಸೇವೆ ಆಟ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದಿತ್ತು. ಈ ವೇಳೆ ಭಾಗವತಿಕೆಗೆ ಬಂದ ಕುಳಿತ ಪಟ್ಲ ಸತೀಶ್ ಶೆಟ್ಟಿ ಅವರನ್ನು ಮೇಳದ ವ್ಯವಸ್ಥಾಪಕರು ಏಕಾಏಕಿ ಬಂದು ಭಾಗವತಿಕೆಯಿಂದ ಎಬ್ಬಿಸಿದ್ದಾರೆ.
ಕಟೀಲು ಮೇಳದ ಯಜಮಾನಿಕೆ ವಿಚಾರವಾಗಿ ಏಲಂ ಪ್ರಕ್ರಿಯೆ ನಡೆಸಬೇಕು ಅಂತ ವಾದ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಮೇಳದ ಆಡಳಿತ ಮತ್ತು ಕಲಾವಿದರ ಮುನಿಸು ಕೂಡ ಇತ್ತು. ಆದರೆ ಎರಡು ದಿನಗಳ ಹಿಂದೆ ದೇವಸ್ಥಾನದ ಪರವಾಗಿ ಬಂದಿದ್ದ ಕೊರ್ಟ್ ತೀರ್ಪು ಬಂದಿತ್ತು. ಆದರೆ ಖ್ಯಾತ ಭಾಗವತ ಪಟ್ಲ ಸತೀಶ ಶೆಟ್ಟಿ ಕಲಾವಿದರ ಪರ ಇದ್ದಾರೆಂಬ ನೆಲೆಯಲ್ಲಿ ಯಕ್ಷಗಾನದ ನಡುವೆಯೇ ಅವಮಾನಿಸಿ ವ್ಯವಸ್ಥಾಪಕರು ಹೊರಕಳಿಸಿದ್ದಾರೆ.
ಈ ಎಲ್ಲ ಬೆಳವಣಿಗೆ ಬಗ್ಗೆ ದೇವಸ್ಥಾನದ ಆಸ್ರಣ್ಣ ಕುಟುಂಬಸ್ಥರು ಮತ್ತು ಆಡಳಿತ ವರ್ಗದ ವಿರುದ್ಧ ಭಾರೀ ಕಲಾ ಪ್ರೇಕ್ಷಕರ ಆಕ್ರೋಶ ವ್ಯಕ್ತವಾಗಿದೆ. ಕಟೀಲು ಮೇಳದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ತನ್ನ ಅದ್ಭುತ ಕಂಠ ಸಿರಿಯಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಪಟ್ಲ ಸತೀಶ್ ಶೆಟ್ಟಿ ಅವರು ಯಕ್ಷಗಾನ ಸಾಧನೆಗಾಗಿ ಯಕ್ಷದ್ರುವ ಎಂದು ಬಿರುದು ಪಡೆದಿದ್ದರು. ಅಲ್ಲದೇ ಯಕ್ಷದ್ರುವ ಪಟ್ಲ ಫೌಂಡೇಷನ್ ಸ್ಥಾಪನೆ ಮಾಡಿ ಬಡ ಕಲಾವಿದರಿಗೆ ಕೋಟ್ಯಾಂತರ ರೂ ನೆರವು ನೀಡಿದ್ದರು. ಅಲ್ಲದೇ ಪಟ್ಲ ಸತೀಶ್ ಶೆಟ್ಟಿ ಅವರಿಗೆ ವಿದೇಶದಲ್ಲೂ ಯಕ್ಷಗಾನ ಪಸರಿಸಿದ ಕೀರ್ತಿ ಇದೆ.