ಬೆಂಗಳೂರು: ತಮಿಳು ಸೂಪರ್ಸ್ಟಾರ್ ರಜಿನಿಕಾಂತ್ 33 ವರ್ಷಗಳ ಬಳಿಕ ತಮ್ಮ ಸ್ನೇಹಿತನೊಂದಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ.’ತಲೈವರ್ 170′ ಸಿನಿಮಾದಲ್ಲಿ ಇಬ್ಬರು ಅಭಿನಯಿಸಲಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದೆ ಅಂತಿದ್ದಾರೆ ಸಿನಿಮಾ ಪಂಡಿತರು.
ಈ ಕುರಿತು ರಜಿನಿಕಾಂತ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ. ಅಮಿತ್ ಬಚ್ಚನ್ ಜೊತೆಗಿರುವ ಫೋಟೋ ಹಂಚಿಕೊಂಡು, ’33 ವರ್ಷಗಳ ಬಳಿಕ ನನ್ನ ಸ್ನೇಹಿತನೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ. ಅಮಿತಾಬ್ ಬಚ್ಚನ್ ತಮ್ಮ ಮುಂದಿನ ಚಿತ್ರ ಲೈಕಾ ನಿರ್ಮಾಣದ ‘ತಲೈವರ್ 170’ರಲ್ಲಿ ನಟಿಸುತ್ತಿದ್ದಾರೆ. ಇದೊಂದು ಹೃದಯ ತುಂಬಿದ ಸಮಯವಾಗಲಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
‘ಜೈಲರ್’ ಯಶಸ್ಸಿನ ಬಳಿಕ ಮತ್ತೊಂದು ಚಿತ್ರ ಘೋಷಿಸಿರುವ ಅವರು ಬಾಲಿವುಡ್ನ ಹಿರಿಯ ನಟ ಅಮಿತಾಬ್ ಬಚ್ಚನ್ ಜೊತೆಗೆ ತೆರೆ ಹಂಚಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಈ ಸಿನಿಮಾದ ಹೆಸರು ‘ತಲೈವರ್ 170’.
‘ಜೈಲರ್’ ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿಬಂದ ಆಯಕ್ಷ್ಯನ್ ಕಾಮಿಡಿ ಚಿತ್ರ. ಇದು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತು. ಇದೀಗ ರಜಿನಿಕಾಂತ್ ‘ಲಾಲ್ ಸಲಾಂ’ ಚಿತ್ರದಲ್ಲಿ ಮಿಂಚಲು ಅಣಿಯಾಗುತ್ತಿದ್ದಾರೆ. ರಜಿನಿಕಾಂತ್ ಮಗಳು ಐಶ್ವರ್ಯ ರಜಿನಿಕಾಂತ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಲೈಕಾ ನಿರ್ಮಾಣದಡಿ ಸುಬಸ್ಕರನ್ ಅಲಿರಾಜ್ ನಿರ್ಮಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಇದ್ದಾರೆ.’ತಲೈವರ್ 170′ ಸಿನಿಮಾ ಕುರಿತು: ‘ತಲೈವರ್ 170’ ಚಿತ್ರಕ್ಕೆ ಲೈಕಾ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಟಿ.ಜೆ.ಗ್ಯಾನವೆಲ್ ನಿರ್ದೇಶಿಸುತ್ತಿದ್ದಾರೆ. ರಾಣಾ ದುಗ್ಗುಬಾಟಿ ಮತ್ತು ಫಹಾದ್ ಫಸಲ್ ಕೂಡ ನಟಿಸುತ್ತಿದ್ದಾರೆ. ಈ ಮೊದಲೇ ಘೋಷಿಸಿದಂತೆ ಚಿತ್ರದಲ್ಲಿ ದುಶರಾ ವಿಜಯನ್, ರಿತಿಕ ಸಿಂಗ್, ಮಂಜು ವಾರಿಯರ್ ಕೂಡ ಬಣ್ಣ ಹಚ್ಚುತ್ತಿದ್ದಾರೆ. ‘ಜೈಲರ್’ ಸಿನಿಮಾಗೆ ಅದ್ಭುತ ಸಂಗೀತ ಸಂಯೋಜಿಸಿದ್ದ ಅನಿರುದ್ದ್ ರವಿಚಂದ್ರನ್ ಅವರ ಸಂಗೀತ ಚಿತ್ರಕ್ಕಿರಲಿದೆ.