ಹಿಂದೂಗಳನ್ನು ಗುರಿಯಾಗಿಸಿ ಉದ್ದೇಶಿತ ಹತ್ಯೆ: ಕಾಶ್ಮೀರದಿಂದ ಮತ್ತೊಮ್ಮೆ ಪಂಡಿತರ ಪಲಾಯನ

ನವದೆಹಲಿ: ಉದ್ದೇಶಿತ ಹತ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರು ಸೇರಿದಂತೆ ಕಾಶ್ಮೀರದಲ್ಲಿ ವಾಸಿಸುವ ಹಿಂದೂಗಳು ಕಣಿವೆಯನ್ನು ತೊರೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಗುರುವಾರ (ಜೂನ್ 2) ರಾಜಸ್ಥಾನದ ಬ್ಯಾಂಕ್ ಉದ್ಯೋಗಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಮೇ 1 ರಿಂದ ಇಂದಿನವರೆಗೆ ಇದು ಕಣಿವೆಯಲ್ಲಿ ನಡೆದ ಎಂಟನೇ ಮತ್ತು ಮುಸ್ಲಿಮೇತರ ಮೂರನೆ ಸರ್ಕಾರಿ ನೌಕರನ ಉದ್ದೇಶಿತ ಹತ್ಯೆಯಾಗಿದೆ. ಮಂಗಳವಾರ (ಮೇ 31) ಕುಲ್ಗಾಮ್ ಜಿಲ್ಲೆಯಲ್ಲಿ ಮಹಿಳಾ ಶಿಕ್ಷಕಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದ ಕೆಲವೇ ಗಂಟೆಗಳ ನಂತರ, ಕಾಶ್ಮೀರಿ ಪಂಡಿತ್ ಉದ್ಯೋಗಿಗಳ ಸಂಘಟನೆಯು 24 ಗಂಟೆಗಳಲ್ಲಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸರ್ಕಾರ ಸ್ಥಳಾಂತರಿಸದಿದ್ದರೆ ಕಣಿವೆಯನ್ನು ತೊರೆಯುವುದಾಗಿ ಬೆದರಿಕೆ ಹಾಕಿದ್ದರು.

ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗಗಳನ್ನು ನೀಡಲಾಗುತ್ತಿದೆ. ಆದರೂ, ಸರಕಾರಿ ಉದ್ಯೋಗಿಗಳು ಉಗ್ರರ ಗುಂಡೇಟಿಗೆ ಬಲಿಯಾಗುತ್ತಿದ್ದಾರೆ. ಜಮ್ಮು ವಿಭಾಗದ ಸಾಂಬಾ ಜಿಲ್ಲೆಯವರಾದ ರಜನಿ ಬಾಲಾ ಅವರು ಕುಲ್ಗಾಮ್‌ನ ಸರ್ಕಾರಿ ಶಾಲೆಯೊಳಗೆ ಮಂಗಳವಾರ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು. ಆಕೆಯ ಮೊದಲು, ಬುದ್ಗಾಮ್ ಜಿಲ್ಲೆಯ ತಹಸೀಲ್ದಾರ್ ಚದೂರ ಅವರ ಕಚೇರಿಯಲ್ಲಿ ಗುಮಾಸ್ತರಾಗಿದ್ದ ರಾಹುಲ್ ಭಟ್ ಅವರನ್ನು ಮೇ 12 ರಂದು ಅವರ ಕಚೇರಿಯೊಳಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದೀಗ ಬ್ಯಾಂಕ್ ಉದ್ಯೋಗಿಯೊಬ್ಬರನ್ನು ಹತ್ಯೆ ಮಾಡಲಾಗಿದೆ.

ಕಣಿವೆಯಲ್ಲಿ ಹಿಂದೂಗಳನ್ನು ಗುರಿಯಾಗಿಸಿ ನಡೆಸುತ್ತಿರುವ ಉದ್ದೇಶಿತ ಹತ್ಯೆಯಿಂದ ಆಹತರಾದ ಹಿಂದೂಗಳು ಮತ್ತೊಮ್ಮೆ ಕಣಿವೆಯನ್ನು ತೊರೆಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

Source: ZeeNews