ಹೊಸದಿಲ್ಲಿ: ಎಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತದ ಸೇನೆ ಪಾಕಿಸ್ತಾನದ ವಿರುದ್ದ ಪ್ರತೀಕಾರ ಆರಂಭಿಸಿದೆ.
ಮೇ 7ರ ಬುಧವಾರ ನಸುಕಿನ ವೇಳೆ ‘ಆಪರೇಷನ್ ಸಿಂದೂರ್’ ಅಡಿಯಲ್ಲಿ ಭಾರತೀಯ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದೆ ಎಂದು ಭಾರತ ದೃಢಪಡಿಸಿದೆ. ಭಾರತದಲ್ಲಿ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿವೆ ಎನ್ನಲಾದ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಸಂಘಟನೆಗಳ ಮುಖ್ಯಸ್ಥರನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ. ಒಟ್ಟು 9 ಉಗ್ರ ಅಡಗುತಾಣಗಳನ್ನು ಧ್ವಂಸ ಮಾಡಿದೆ. ಭಾರತವು ಕೋಟ್ಲಿ, ಮುರಿಡ್ಕೆ, ಬಹವಾಲ್ಪುರ್ ಮತ್ತು ಮುಜಫರಾಬಾದ್‌ಗಳಲ್ಲಿನ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಮುರಿಡ್ಕೆ ಲಷ್ಕರ್-ಎ-ತೈಬಾ ಭಯೋತ್ಪಾದಕ ಗುಂಪಿನ ಪ್ರಧಾನ ಕಚೇರಿಯಾಗಿದೆ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹಲ್ವಾಪುರವು ಮಸೂದ್ ಅಜರ್ ನಡೆಸುತ್ತಿರುವ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್‌ನ ನೆಲೆಯಾಗಿದೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರ: ನ್ಯಾಯ ಸಿಕ್ಕಿದೆಪಾಕಿಸ್ತಾನದಲ್ಲಿ ಮಿಲಿಟರಿ ದಾಳಿಗಳು ದೃಢಪಟ್ಟ ಸ್ವಲ್ಪ ಸಮಯದ ನಂತರ, ಭಾರತೀಯ ಸೇನೆಯು X ನಲ್ಲಿ ಪೋಸ್ಟ್‌ನಲ್ಲಿ “ನ್ಯಾಯ ಸಲ್ಲಿಸಲಾಗಿದೆ. ಜೈ ಹಿಂದ್!” ಎಂದು ಪೋಸ್ಟ್ ಮಾಡಿದೆ.
ಭಾರತ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಒಂಬತ್ತು ಸ್ಥಳಗಳಲ್ಲಿ ದಾಳಿ ನಡೆಸಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ 100 ಕ್ಕೂ ಅಧಿಕ ಉಗ್ರರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ತಿಳಿಸಿದೆ.
ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ:
ಭಾರತದ ದಾಳಿಯ ನಂತರ, ಪಾಕಿಸ್ತಾನವು ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ. ಜಮ್ಮು ಮತ್ತು ಕಾಶ್ಮೀರದ ಭಿಂಬರ್ ಗಲಿ ಪ್ರದೇಶದಲ್ಲಿ ಫಿರಂಗಿಗಳನ್ನು ಬಳಸಿ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆಯು ‘ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದೆʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುವರಿ ನಿರ್ದೇಶನಾಲಯ ಜನರಲ್ ಆಫ್ ಪಬ್ಲಿಕ್ ಇನ್ಫಾರ್ಮೇಷನ್ (ADG PI) X ನಲ್ಲಿ, ‘ಪಾಕಿಸ್ತಾನವು ಮತ್ತೆ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ. ಪೂಂಚ್-ರಾಜೌರಿ ಪ್ರದೇಶದ ಭಿಂಬರ್ ಗಲಿಯಲ್ಲಿ ಫಿರಂಗಿಗಳನ್ನು ಬಳಸಿ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದೆʼ ಎಂದು ಬರೆದಿದೆ.












