ಮಂಗಳೂರು: ಪೋಷಕರಿಲ್ಲದೇ ಅನಾಥಳಾಗಿದ್ದ ಹಿಂದೂ ಹೆಣ್ಣು ಮಗುವನ್ನು ದತ್ತು ಪಡೆದಿದ್ದ ಮುಸ್ಲಿಂ ದಂಪತಿ ಕೊನೆಗೆ ಆಕೆಯ ಇಷ್ಟದಂತೆ ಹಿಂದೂ ಹುಡುಗನ ಜೊತೆಯಲ್ಲಿಯೇ ವಿವಾಹ ಮಾಡಿರುವ ಅಪರೂಪದ ಕೋಮು ಸೌಹಾರ್ದತೆಯ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಇಲ್ಲಿನ ಅಬ್ದುಲ್ಲಾ ಮತ್ತು ಖದೀಜಾ ಮುಸ್ಲಿಂ ದಂಪತಿ ತಮ್ಮ ಸಾಕು ಮಗಳು ರಾಜೇಶ್ವರಿಗೆ ಹಿಂದೂ ಹುಡುಗನ ಜೊತೆ ವಿವಾಹ ಮಾಡಿದ್ದಾರೆ.
ಕೇರಳದ ಭಾಗವತಿ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನಡೆದಿದ್ದು, ಮುಸ್ಲಿಂ ದಂಪತಿಯ ಸಾಕು ಮಗಳು ರಾಜೇಶ್ವರಿ ಹಿಂದೂ ಸಂಪ್ರದಾಯದಂತೆ ವಿಷ್ಣು ಪ್ರಸಾದ್ ಜೊತೆ ಮದುವೆಯಾಗಿದ್ದಾಳೆ.
ತಾಂಜಾವೂರು ನಿವಾಸಿ ರಾಜೇಶ್ವರಿ ತಾಯಿ ತಂದೆ ಅಬ್ದುಲ್ಲಾ ಅವರ ಕಾಂಞಕಾಡಿನ ಕೃಷಿ ಭೂಮಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ನಂತರ ರಾಜೇಶ್ವರಿಗೆ 10 ವರ್ಷ ಇದ್ದಾಗ ತಂದೆ ತಾಯಿ ತೀರಿಕೊಂಡ ಬಳಿಕ ಅಬ್ದುಲ್ ಅವರೇ ತಮ್ಮ ಮಗಳಂತೆ ರಾಜೇಶ್ವರಿ ಅವರನ್ನು ಸಾಕಿ ಸಲಹಿದ್ದರು. ಇತ್ತೀಚೆಗೆ ವಿಷ್ಣು ಪ್ರಸಾದ್ ಅವರ ಪೋಷಕರು ರಾಜೇಶ್ವರಿ ಅವರನ್ನು ಮಗನಿಗೆ ಮದುವೆ ಮಾಡಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿ ಕೊಡುವಂತೆ ಕೇಳಿದ್ದರು. ಅದರಂತೆ ವಿವಾಹ ಕಾರ್ಯಕ್ರಮದಲ್ಲಿ ಎಲ್ಲ ಧರ್ಮ ದವರು ಪಾಲ್ಗೊಂಡಿದ್ದಾರೆ. ಆ ಮೂಲಕ ಮನುಷ್ಯ ಸಂಬಂಧಕ್ಕೆ ಜಾತಿ, ಮತ, ಇದ್ಯಾವುದರ ಎಲ್ಲೆ ಇರದು ಎಂಬುದನ್ನು ಸಮಾಜಕ್ಕೆ ತೋರಿಸಿದ್ದಾರೆ.