ಕಾಸರಗೋಡು: ಶ್ರೀಕೃಷ್ಣ ಬಸ್ಸಿನ ಸ್ಟೀರಿಂಗ್ ಹಿಡಿದು ಯಾವುದೇ ಪುರುಷರಿಗೆ ಕಮ್ಮಿ ಇಲ್ಲದಂತೆ ಬಸ್ ಚಲಾಯಿಸುತ್ತಾರೆ ಆಡುಕಾತುವಾಯಲ್ ಮೂಲದ ಎನ್ ದೀಪಾ ಎಂಬ ದಿಟ್ಟ ನಾರಿ. ಮಹಿಳೆಯರು ಭಾರೀ ವಾಹನಗಳನ್ನು ಚಲಾಯಿಸಲು ಸಾಧ್ಯವಿಲ್ಲ ಎನ್ನುವ ಪೂರ್ವಾಗ್ರಹವನ್ನು ತೊಡೆದು ಹಾಕಿದ್ದಾರೆ 36 ವರ್ಷ ವಯಸ್ಸಿನ ದೀಪಾ. ಏರುತಗ್ಗಿನ ಗುಡ್ಡಗಾಡಿನ ವಕ್ರ ರಸ್ತೆಗಳಲ್ಲಿ ಪ್ರಯಾಣಿಕರಿಂದ ತುಂಬಿದ ಬಸ್ ಅನ್ನು ಸಲೀಸಾಗಿ ಓಡಿಸುವ ದೀಪಾ ತನ್ನ ಬಹುಕಾಲದ ಕನಸನ್ನು ನನಸಾಗಿಸಿದ್ದಾರೆ. ಇವರ ಕನಸಿಗೆ ಇಂಬು ನೀಡಿದವರು ಬಸ್ ಮಾಲಕ ನಿಶಾಂತ್.
ಅನುಭವಿ ಮತ್ತು ವೇಗಿ ಡ್ರೈವರ್‌ನಂತೆ, ದೀಪಾ ಗಿಜಿಗುಡುವ ಟ್ರಾಫಿಕ್ ನ ಸಮಯದಲ್ಲಿಯೂ ಸಮಯಕ್ಕೆ ಸರಿಯಾಗಿ ತನ್ನ ಗಮ್ಯಸ್ಥಾನವನ್ನು ತಲುಪುತ್ತಾರೆ. ಈ ಬಸ್ ಕಾಞಂಗಾಡ್ ಮತ್ತು ಬಂದಡ್ಕ ನಡುವೆ ಸಂಚರಿಸುತ್ತದೆ. ಕಾಞಂಗಾಡ್‌ನಿಂದ ಬೆಳಗ್ಗೆ 7:50ಕ್ಕೆ ಆರಂಭವಾಗಿ ಸಂಜೆ 3:45ಕ್ಕೆ ಹಿಂತಿರುಗುತ್ತದೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಕಾರಣ ಮಾರ್ಗದಲ್ಲಿ ಸಂಚಾರ ದಟ್ಟಣೆಯ ಸವಾಲುಗಳ ನಡುವೆಯೂ ದೀಪಾ ಯಶಸ್ವಿಯಾಗಿ ಬಸ್ ಚಲಾಯಿಸುತ್ತಾರೆ.
ದೀಪಾ ಮೂರು ವಾರಗಳ ಹಿಂದೆ ತನ್ನ ಮೊದಲ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಸ್ವಲ್ಪ ಬಿಡುವು ಸಿಕ್ಕಾಗಲೆಲ್ಲಾ ಬಸ್ ಸ್ಟೀರಿಂಗ್ ಹಿಡಿಯಲು ನಿರ್ಧರಿಸಿದ್ದಾರೆ. ದೀಪಾ ನಿಶಾಂತ್ ಅವರ ಸಂಬಂಧಿ. ಆದ್ದರಿಂದ, ಬಸ್ಸಿನ ಸಾಮಾನ್ಯ ಚಾಲಕರು ರಜಾ ಮೇಲಿದ್ದಾಗ ಬಸ್ ಅನ್ನು ದೀಪಾ ಚಲಾಯಿಸಬಲ್ಲರು.
2008 ರಲ್ಲಿಲಘು ಮೋಟಾರು ವಾಹನ ಪರವಾನಗಿಯನ್ನು ಪಡೆದುಕೊಂಡ ದೀಪಾಗೆ ಬಸ್ ಓಡಿಸುವ ಬಯಕೆ ಸದಾ ಕಾಡುತ್ತಿತ್ತು. ಟಿಪ್ಪರ್ ಲಾರಿ ಓಡಿಸುವ ಪ್ರಯತ್ನದಿಂದ ಈ ಪ್ರಯಾಣವನ್ನು ಪ್ರಾರಂಭಿಸಿದರು. ಪತಿ, ಬಸ್ ಮಾಲೀಕ ನಿಶಾಂತ್ ಹಾಗೂ ಪ್ರವಾಸಿ ಬಸ್ ಚಾಲಕ ಶಾಜಿ ಅವರ ಪ್ರೋತ್ಸಾಹದಿಂದ ಆಕೆ ಭಾರೀ ವಾಹನ ಚಲಾಯಿಸುವುದನ್ನು ಕಲಿತುಕೊಂಡಿದ್ದಾರೆ.
ದೀಪಾ ಅವರು ಕಳೆದ ನವೆಂಬರ್‌ನಲ್ಲಿ ಹೆವಿ ಮೋಟರ್ ವೆಹಿಕಲ್ ಪರವಾನಗಿ ಪಡೆದಿದ್ದಾರೆ. ಮೂರು ಮಕ್ಕಳ ತಾಯಿಯಾದ ಈಕೆ ಫ್ಯಾಷನ್ ಡಿಸೈನಿಂಗ್ ಮತ್ತು ಮ್ಯೂರಲ್ ಪೇಂಟಿಂಗ್‌ನಲ್ಲಿ ಆಸಕ್ತಿ ಹೊಂದಿದ್ದು, ಕೆಲವು ಶಾಲೆಗಳಲ್ಲಿ ಇದಕ್ಕೆ ಸಂಬಂಧಿಸಿದ ಉದ್ಯೋಗ ಮಾಡಿದ್ದಾರೆ. ಸೌಟು ಹಿಡಿಯುವ ಕೈಗಳು ಬಸ್ ಸ್ಟೀರಿಂಗ್ ಕೂಡಾ ಹಿಡಿಯಬಲ್ಲದು ಎನ್ನುವುದನ್ನು ದೀಪಾ ಸಾಧಿಸಿ ತೋರಿದ್ದಾರೆ.