ಬೆಂಗಳೂರು: ಇತ್ತೀಚೆಗೆ ಕೇರಳದಲ್ಲಿ ತನ್ನ ಕೆಲವು ಔಟ್ಲೆಟ್ಗಳನ್ನು ತೆರೆದಿರುವ ಕರ್ನಾಟಕದ ಜನಪ್ರಿಯ ಡೈರಿ ಬ್ರ್ಯಾಂಡ್ ನಂದಿನಿ, ರಾಜ್ಯದಲ್ಲಿ ತನ್ನ ವಿಸ್ತರಣೆ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಕೇರಳದ ಪಶುಸಂಗೋಪನೆ, ಡೈರಿ ಅಭಿವೃದ್ಧಿ ಮತ್ತು ಸಹಕಾರಿಗಳ ಸಚಿವೆ ಜೆ ಚಿಂಚುರಾಣಿ, ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಸಿಇಒ ಅವರಿಂದ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೆಎಂಎಫ್ ನಿರ್ಧಾರವನ್ನು ಸ್ವಾಗತಿಸಿದ ಚಿಂಚುರಾಣಿ, ಕಾಂಗ್ರೆಸ್ ಗೆಲುವಿನ ನಂತರ ಕರ್ನಾಟಕದಲ್ಲಿ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಈ ಬದಲಾವಣೆಯಾಗಿದೆ ಎಂದು ಹೇಳಿರುವುದಾಗಿ ಹಿಂದುಸ್ಥಾನ್ ಟೈಮ್ಸ್ ವರದಿ ಹೇಳಿದೆ.
ರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹೊಸ ಮಳಿಗೆಗಳನ್ನು ತೆರೆಯುವುದಿಲ್ಲ ಎಂಬ ಮಾಹಿತಿ ಸಿಇಒ ಅವರಿಂದ ಬಂದಿದೆ. ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟದ (ಕೆಸಿಎಂಎಂಎಫ್) ಮಿಲ್ಮಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಾಜ್ಯವು ಬಯಸುತ್ತದೆ ಎಂದು ಎಂದು ಸಚಿವೆ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕರ್ನಾಟಕದ ನಂದಿನಿಯಿಂದ ಹಾಲು ಮತ್ತು ಡೈರಿ ಉತ್ಪನ್ನಗಳು ರಾಜ್ಯಕ್ಕೆ ಪ್ರವೇಶಿಸುವ ಬಗ್ಗೆ ಕೇರಳದ ಸಿಪಿಐ (ಎಂ) ನೇತೃತ್ವದ ಎಲ್ಡಿಎಫ್ ಸರ್ಕಾರವು ಕಳವಳ ವ್ಯಕ್ತಪಡಿಸಿತ್ತು. ಈ ಸಮಸ್ಯೆಯನ್ನು ಬಗೆಹರಿಸುವಂತೆ ಕೇರಳ ಸರ್ಕಾರ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ (ಎನ್ಡಿಡಿಬಿ) ದೂರು ಸಲ್ಲಿಸಿತ್ತು.
ಈ ವರ್ಷದ ಏಪ್ರಿಲ್ನಲ್ಲಿ, ಕೆಸಿಎಂಎಂಎಫ್ ಕೆಲವು ರಾಜ್ಯ ಹಾಲು ಮಾರಾಟ ಒಕ್ಕೂಟಗಳು ತಮ್ಮ ರಾಜ್ಯಗಳ ಹೊರಗಿನ ಮಾರುಕಟ್ಟೆಗಳಿಗೆ ಆಕ್ರಮಣಕಾರಿಯಾಗಿ ಪ್ರವೇಶಿಸುವ ಪ್ರವೃತ್ತಿಯನ್ನು “ಅನೈತಿಕ” ಎಂದು ಬಣ್ಣಿಸಿತ್ತು. ಕೆಎಂಎಫ್ ತನ್ನ ನಂದಿನಿ ಬ್ರಾಂಡ್ ಹಾಲು ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡಲು ಕೇರಳದ ಕೆಲವು ಭಾಗಗಳಲ್ಲಿ ತನ್ನ ಮಳಿಗೆಗಳನ್ನು ತೆರೆಯುವ ಕ್ರಮವನ್ನು ಅದು ಟೀಕಿಸಿತ್ತು. ಇದು ದೇಶಾದ್ಯಂತವಿರುವ ಸಹಕಾರಿ ಮನೋಭಾವದ ಉಲ್ಲಂಘನೆ ಎಂದು ಅದು ಪ್ರತಿಪಾದಿಸಿತ್ತು.