JN.1 ಉಪತಳಿ ಉಪಟಳ: ಎರಡನೇ ಸ್ಥಾನದಲ್ಲಿ ರಾಜ್ಯ; ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ

ಬೆಂಗಳೂರು: ಕೊರೋನಾ ರೂಪಾಂತರಿ ಜೆಎನ್ 1 ಉಪತಳಿ ಉಪಟಳ ಹೆಚ್ಚುತ್ತಿದ್ದು ರಾಜ್ಯದಲ್ಲಿ ಮೂವರು ಬಲಿಯಾಗಿದ್ದಾರೆ. ಕೋವಿಡ್ ಆತಂಕ ದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಮಹತ್ವದ ಸಭೆ ನಡೆಯಲಿದೆ. ಆರೋಗ್ಯ ಇಲಾಖೆಯ ಸಚಿವರು, ಅಧಿಕಾರಿಗಳು ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೂ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯವು ಸಾರ್ವಜನಿಕ ಆರೋಗ್ಯ ಸನ್ನದ್ಧತೆ ಕುರಿತು ನಡೆಸಿದ ಪರಿಶೀಲನಾ ಸಭೆಯಲ್ಲಿ ಬಹಿರಂಗಪಡಿಸಿದ ಅಂಕಿ ಅಂಶಗಳ ಪ್ರಕಾರ ಡಿಸೆಂಬರ್ 20 ರವರೆಗೆ ಒಟ್ಟು ಸಕ್ರಿಯ ಕೋವಿಡ್ -19 ಪ್ರಕರಣಗಳಲ್ಲಿ ಕೇರಳದ ನಂತರ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಡಿಸೆಂಬರ್ 20 ರ ಹೊತ್ತಿಗೆ, ದೇಶಾದ್ಯಂತ 2,305 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ 2,041 ಪ್ರಕರಣಗಳು ದಾಖಲಾಗಿದ್ದರೆ, ಕರ್ನಾಟಕದಲ್ಲಿ 79 ಪ್ರಕರಣಗಳು ದಾಖಲಾಗಿವೆ.

ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೊರೋನಾ ರೂಪಾಂತರಿ ಸ್ವರೂಪ ಸೌಮ್ಯವಾಗಿರುತ್ತದೆ ಎಂದರು.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್, ದಿನವೊಂದರಲ್ಲಿ ನಡೆಸಲಾಗುವ ಪರೀಕ್ಷೆಗಳ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.

ರಾಜ್ಯವು ದಿನಕ್ಕೆ 1,000 ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸುತ್ತಿದೆ. ಶನಿವಾರದ ವೇಳೆಗೆ ಇದು 5,000ಕ್ಕೆ ತಲುಪುತ್ತದೆ. ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ನಿಭಾಯಿಸಲು ಪೂರ್ವಭಾವಿ ಸಿದ್ಧತೆಗಳ ಅಗತ್ಯವನ್ನು ಕೇಂದ್ರ ಆರೋಗ್ಯ ಸಚಿವರು ಒತ್ತಿ ಹೇಳಿದರು. ಆಮ್ಲಜನಕ, ಔಷಧಗಳು ಮತ್ತು ಸುಧಾರಿತ ಶೇಖರಣಾ ಸೌಲಭ್ಯಗಳ ಸಾಕಷ್ಟು ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಮನಗಾಣಿಸಿದ್ದು, ಆಸ್ಪತ್ರೆಗಳಲ್ಲಿ ಹೆಚ್ಚಿನ ಐಸಿಯು ಮತ್ತು ಹಾಸಿಗೆಗಳನ್ನು ಸ್ಥಾಪಿಸಲಾಗುವುದು. ಈ ಕ್ರಮಗಳನ್ನು ಜಾರಿಗೆ ತರಲು ಕರ್ನಾಟಕ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.

ಹೊಸ ರೂಪಾಂತರ, JN.1, ಅನೇಕ ದೇಶಗಳಲ್ಲಿ ಹಬ್ಬುತ್ತಿದೆ. ಆದರೆ ಓಮಿಕ್ರಾನ್‌ಗೆ ಹೋಲಿಸಿದರೆ ಇದರ ಪರಿಣಾಮ ಕಡಿಮೆ ಅಪಾಯಕಾರಿ ಹೀಗಾಗಿ ಜನರು ಭಯಪಡುವ ಅಗತ್ಯವಿಲ್ಲ ಆದರೆ ಜನರು ಎಚ್ಚರದಿಂದರಬೇಕು ಎಂದರು.

ಕೇರಳ ಮತ್ತು ತಮಿಳುನಾಡು ಗಡಿಯಲ್ಲಿನ ಪ್ರದೇಶಗಳಲ್ಲಿ ನಿರ್ಬಂಧಗಳ ಬಗ್ಗೆ ಮಾತನಾಡಿ ಗಡಿ ಪ್ರದೇಶಗಳನ್ನು ನಾವು ಮೇಲ್ವಿಚಾರಣೆ ಮಾಡುತ್ತೇವೆ. ರೋಗಲಕ್ಷಣಗಳನ್ನು ಹೊಂದಿರುವವರನ್ನು ಮಾತ್ರ ಪರೀಕ್ಷಿಸುತ್ತೇವೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತೀವ್ರವಾದ ಉಸಿರಾಟದ ಸೋಂಕು (SARI) ಮತ್ತು ಇನ್ಫ್ಲುಯೆನ್ಸ ಲೈಕ್ ಇಲ್ನೆಸ್ (ILI) ಹೊಂದಿರುವ ಎಲ್ಲಾ ರೋಗಿಗಳು ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಭೆಯ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ಪರೀಕ್ಷೆಗೆ ಶುಲ್ಕವನ್ನು ನಿಗದಿಪಡಿಸಲಾಗುವುದು ಎಂದು ಅವರು ಹೇಳಿದರು. ಕ್ರಿಸ್ ಮಸ್ ಅಥವಾ ಹೊಸ ವರ್ಷದ ಆಚರಣೆಗೆ ಯಾವುದೇ ನಿರ್ಬಂಧ ಹೇರುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.