ಮುಲುಂಡ್: ಕರ್ನಾಟಕ ಸಂಘ ಮಾಟುಂಗ ಮುಂಬೈ ಹಾಗೂ ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಿಂದ ಏಪ್ರಿಲ್ 8 ರಂದು ಸಂಸ್ಕೃತಿ ಸಂಭ್ರಮ ಉತ್ಸವ ಮುಲುಂಡ್ (ಪ)ನ ಮಹಾಕವಿ ಕಾಳಿದಾಸ ಸಭಾಗೃಹದಲ್ಲಿ ವೈವಿಧ್ಯಪೂರ್ಣ ಸಾಂಸ್ಕೃತಿಕ ನೃತ್ಯ ವೈಭವ ಕಾರ್ಯಕ್ರಮದೊಂದಿಗೆ ಯಶಸ್ವಿಯಾಗಿ ಜರುಗಿತು.
ಸಂಜೆ ಜರುಗಿದ ಸಮಾರೋಪ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮನೋಹರ ಎಂ ಕೋರಿ ಮಾತನಾಡಿ, ಕರ್ನಾಟಕ ಸಂಘ ಕಳೆದ 9 ದಶಕಗಳಲ್ಲಿ ಮಹಾನಗರದಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಸದಾ ಜೀವಂತವಾಗಿ ಉಳಿಸುವಲ್ಲಿ ಸಾಂಸ್ಕೃತಿಕ ವೇದಿಕೆಯಾಗಿ ಕರ್ನಾಟಕ ರಾಜ್ಯದ ಪ್ರಾತಿನಿಧ್ಯ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಪ್ರಸಕ್ತ ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸರ್ವ ತುಳು ಕನ್ನಡಿಗರು ಸಹಾಯ ಹಸ್ತ ನೀಡಿ ಶೀಘ್ರವಾಗಿ ಲೋಕಾರ್ಪಣೆ ಮಾಡಲು ಸಹಕರಿಸಬೇಕಾಗಿ ವಿನಂತಿಸಿದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್ ನ ನಿರ್ದೇಶಕ ವಕ್ವಾಡಿ ಪ್ರವೀಣ್ ಶೆಟ್ಟಿ ಮಾತನಾಡಿ, ಮಹಾನಗರದಲ್ಲಿ ಕನ್ನಡ ಭಾಷೆ ಸಂಸ್ಕೃತಿಯ ಬೆಳವಣಿಗೆಗಾಗಿ ಅವಿರತ ಶ್ರಮದ ಮೂಲಕ ಭಾಷಾ ಸಂಸ್ಕೃತಿಯ ವೈವಿಧ್ಯತೆಯನ್ನು ಹೊರನಾಡಿನಲ್ಲಿ ಅನಾವರಣದ ಸಾಧನೆ ಮೂಲಕ ಕಳೆದ 90 ವರ್ಷಗಳಿಂದ ಈ ಸಂಘವು ಸಾಂಘಿಕವಾಗಿ ಮಹಾನಗರದಲ್ಲಿ ಕನ್ನಡ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದೆ ಎಂದು ಹೇಳಿದರು.
ಇನ್ನೋರ್ವ ಅತಿಥಿ ಬಂಟರ ಸಂಘ ಪುಣೆ ಇದರ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲಬೆಟ್ಟು ಮಾತನಾಡಿ ಕಳೆದ 9 ದಶಕಗಳ ಹಿರಿಯ ಪದಾಧಿಕಾರಿಗಳ ದೂರ ದೃಷ್ಟಿ ಚಿಂತನೆಯಿಂದ ಮಹಾನಗರ ಕರ್ಮ ಭೂಮಿಯಲ್ಲಿ ಯಥೇಚ್ಛವಾಗಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಾಟುಂಗ ಪ್ರದೇಶದಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರ ಬಿಂದುವಾಗಿ ಮೆರೆದಿದೆ. ಬೇಡಿದ ಕೈಗಳಿಗಿಂತ ಕೊಟ್ಟ ಕೈಗಳ ದಾನ ಈ ಸಂಸ್ಥೆಯ ನೂತನ ಕಟ್ಟಡದ ಅಭಿವೃದ್ಧಿಗೆ ಸಹಕಾರವಾಗಲಿ ಕರ್ನಾಟಕ ಸಂಘಕ್ಕೆ ನೀಡಿದ ಸಹಕಾರ ಸಮಾಜಮುಖಿ ಚಿಂತನೆಯ ವ್ಯಕ್ತಿಗಳಿಗೆ ಪರಮಾತ್ಮನ ಸಹಾಯ ಸದಾ ಇರಲಿದೆ ಎಂದು ಹೇಳಿದರು.
ಕರ್ನಾಟಕ ಮಲ್ಲ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ ಮಾತನಾಡಿ, ತುಳು ಕನ್ನಡಿಗರನ್ನು ಜಾಗೃತಗೊಳಿಸಿ ಎಲ್ಲರನ್ನೂ ಸೇರಿಸುವ ಮಹತ್ತರ ಕೆಲಸ ಈ ಸಂಘದಲ್ಲಿ ಅಹರ್ಷಿಣಿಯಾಗಿ ನಡೆದು ಬಂದಿದೆ. ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ತುಂಬಿ ತುಳುಕುತ್ತಿದ್ದ ಸಭಾಗೃಹ ಕಳೆದ ಎಂಟು ವರ್ಷಗಳಿಂದ ದೂರವಾಗಿದೆ. ಮತ್ತೆ ಯಕ್ಷಗಾನ, ನಾಟಕ, ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪುನರ್ಜ್ಜೀವನಗೊಳ್ಳಲಿ ಎಂದು ಹಾರೈಸಿದರು.
ಭಗೀರಥ ಕೆಮಿಕಲ್ಸ್ ನ ಆಡಳಿತ ನಿರ್ದೇಶಕ ಬಾಲಕೃಷ್ಣ ಭಂಡಾರಿ, ಲ್ಯೂಮೆಸ್ಸ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಕಾರ್ಯಧ್ಯಕ್ಷ ಆಡಳಿತ ನಿರ್ದೇಶಕ ಕೆ ಸಿ ಶೆಟ್ಟಿ ಭಂಡಾರಿ, ಮಹಾಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಸಂದರ್ಭೋಚಿತವಾಗಿ ಮಾತನಾಡಿ ನೂತನ ಕಟ್ಟಡದ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಜಿ ಕಪ್ಪಣ್ಣ ದಂಪತಿಗಳನ್ನು ಸಮಾರಂಭದಲ್ಲಿ ಗೌರವ ಪೂರ್ಣವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ ಸೋಮಶೇಖರ್ ಐಎಎಸ್ , ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ , ಶ್ರೀ ಜಿ ಫುಡ್ ಕ್ರಾಪ್ಟ್ ಪ್ರೈ. ಲಿ. ನಿರ್ದೇಶಕ ನಿಲೇಶ್ ಶರದ್ ಪಾರೇಖ್, ಪರ್ಕ್ಸ್ ಲಿಂಕ್ ಎಂಡ್ ಸರ್ವಿಸಸ್ ನ ಆಡಳಿತ ನಿರ್ದೇಶಕ ಅಶೋಕ್ ಭಂಡಾರಿ, ಪುಣೆ ಬಂಟರ ಸಂಘದ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಸ್ಥಳೀಯ ಸಚಿವ ಮಂಗಳ್ ಪ್ರಭಾತ್ ಲೋಢ, ಗೌ. ಕಾರ್ಯದರ್ಶಿ ವಿಶ್ವೇಶ್ವರ ಎನ್ ಮೇಟಿ, ಗೌ. ಕೋಶಾಧಿಕಾರಿ ಓಂದಾಸ್ ಕಣ್ಣಂಗಾರ್, ಕರ್ನಾಟಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಎಂ ಎನ್ ಗುಡಿ ಸ್ವಾಗತಿಸಿದರು. ಸದಸ್ಯಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಳಿಕ ಸಂಘವು ಆಯೋಜಿಸಿದ್ದ ಸ್ಥಳೀಯ ಸಂಘ ಸಂಸ್ಥೆಗಳ ಸಮೂಹ ನೃತ್ಯ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ತೀರ್ಪುಗಾರರಾಗಿ ಶೈಲಜಾ ದೇಸಾಯಿ, ಸಹನಾ ಭಾರದ್ವಾಜ್, ವ್ರಜೇಶ್ ಆನಂದ್ ಸಹಕರಿಸಿದರು.
ಅಂತರಾಷ್ಟ್ರೀಯ ಖ್ಯಾತಿಯ ಸವಿತಾ ಗಣೇಶ್ ಪ್ರಸಾದ್ ಬೆಂಗಳೂರು ತಂಡದವರಿಂದ ಅಳ್ಳೀ ಬ್ಯಾಂಡ್ ಜಾನಪದ ಗಾಯನ ವಾದನ ಕಾರ್ಯಕ್ರಮ ಜರುಗಿತು.
ಚಿತ್ರ, ವರದಿ: ರಮೇಶ್ ಉದ್ಯಾವರ್.
ಮೊ. 9820949820