ವಿಧಾನಸಭಾ ಚುನಾವಣೆ: ಶೇಕಡಾವಾರು ಮತದಾನದಲ್ಲಿ ದಾಖಲೆ ಸೃಷ್ಟಿ; ಇದೇ ಮೊದಲ ಬಾರಿಗೆ 73.19% ಮತದಾನ

ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ ನಡೆದ ವಿಧಾನಸಭಾ ಚುನಾವಣೆಗೆ ಸಾರ್ವಕಾಲಿಕ ಗರಿಷ್ಠ 73.19% ಮತದಾನವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 85.56% ಮತದಾನವಾಗಿದೆ. ಬೆಂಗಳೂರಿನ ಬಿಬಿಎಂಪಿ ದಕ್ಷಿಣ ಜಿಲ್ಲೆಯಲ್ಲಿ 52.33% ದೊಂದಿಗೆ ಅತಿ ಕಡಿಮೆ ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆದಾಗ್ಯೂ, ಇದು ತಾತ್ಕಾಲಿಕ ಅಂಕಿ ಅಂಶವಾಗಿದ್ದು, ಇದು ಅಂಚೆ ಮತದಾನವನ್ನು ಒಳಗೊಂಡಿಲ್ಲ ಎಂದು ಆಯೋಗ ತಿಳಿಸಿದೆ.

1957 ರ ಬಳಿಕ ಈ ಬಾರಿ ನಡೆದಿರುವ ಚುನಾವಣೆಯಲ್ಲಿ ಅತ್ಯಧಿಕ ಮತದಾನ ನಡೆದಿದೆ ಎನ್ನಲಾಗಿದೆ.

ಈ ವರ್ಷ 34 ರಲ್ಲಿ 10 ಜಿಲ್ಲೆಗಳಲ್ಲಿ 80% ಕ್ಕಿಂತ ಹೆಚ್ಚು ಮತದಾನವಾಗಿದೆ. ಚಾಮರಾಜನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಹಾಸನ, ಹಾವೇರಿ, ಕೋಲಾರ, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ 80% ಕ್ಕಿಂತ ಹೆಚ್ಚು ಮತದಾನವಾಗಿದೆ.

1985 ರಿಂದ ಈಚೆಗೆ ಯಾವುದೇ ರಾಜಕೀಯ ಪಕ್ಷಕ್ಕೆ ನಿರ್ಣಾಯಕ ಜನಾದೇಶ ದೊರೆತಿಲ್ಲ. ಈ ಬಾರಿ ಮತದಾನದ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದರೂ ನಿರ್ದಿಷ್ಟ ಪಕ್ಷಕ್ಕೆ ಬಹುಮತದ ಜನಾದೇಶ ದೊರೆಯುವುದೋ ಇಲ್ಲವೋ ಎನ್ನುವುದನ್ನು ನಾಳಿನ ಫಲಿತಾಂಶಗಳು ನಿರ್ಣಯಿಸಲಿವೆ.