ನವದೆಹಲಿ: ಬಿಜೆಪಿಯ 25 ಸೇರಿದಂತೆ 28 ಸಂಸದರನ್ನು ಹೊಂದಿರುವ ಕರ್ನಾಟಕವು, ಸಂಸದ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಲೋಕಸಭಾ ಸದಸ್ಯರಿಗೆ ಮೀಸಲಿಟ್ಟ 140 ಕೋಟಿ ರೂ.ಗಳಲ್ಲಿ 20 ಕೋಟಿ (ಶೇ. 14) ಮಾತ್ರ ಬಳಸಿಕೊಂಡಿದೆ. ನಿಧಿ ಬಳಕೆಯಲ್ಲಿ ರಾಜ್ಯ 16ನೇ ಸ್ಥಾನದಲ್ಲಿದೆ.
ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬುಧವಾರ ಕೇಂದ್ರ ಬಜೆಟ್ ಮಂಡನೆಗೆ ಮುನ್ನ 2022-2023ರಲ್ಲಿ ನಿಧಿಯ ಬಳಕೆಯ ಹೇಳಿಕೆಗಳನ್ನು ಬಿಡುಗಡೆ ಮಾಡಿದೆ. ವರದಿಯ ಪ್ರಕಾರ, ಕರ್ನಾಟಕದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಇಬ್ಬರೂ ಒಟ್ಟಾಗಿ 197 ಕೋಟಿ ರೂ.ಗಳ ಹಂಚಿಕೆ ನಿಧಿಯಲ್ಲಿ ರೂ.30 ಕೋಟಿ (15%) ಮಾತ್ರ ಬಳಸಿದ್ದಾರೆ.
ಆದಾಗ್ಯೂ ಕರ್ನಾಟಕವು ತನ್ನ ನೆರೆಯ ರಾಜ್ಯಗಳಾದ ತೆಲಂಗಾಣ( 20 ನೇ ಸ್ಥಾನ), ಮಹಾರಾಷ್ಟ್ರ(21) ಆಂಧ್ರಪ್ರದೇಶ(22) ತಮಿಳುನಾಡು (23) ಕೇರಳ(25) ಮತ್ತು ಗೋವಾ(31) ಗಳಿಗೆ ಹೋಲಿಸಿದರೆ ಉತ್ತಮ ಸ್ಥಾನದಲ್ಲಿದೆ.
ಮೈಸೂರು ಸಂಸದ ಪ್ರತಾಪ್ ಸಿಂಗ, ಉತ್ತರಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆ ಮತ್ತು ಬೆಳಗಾವಿ ಸಂಸದ ಮಂಗಳಾ ಅಂಗಡಿ ತಮ್ಮ ನಿಧಿಗಳನ್ನು 100% ಬಳಸಿದ್ದಾರೆ.
ರಾಜ್ಯಸಭಾ ಸದಸ್ಯರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಮತ್ತು ಲಹರ್ ಸಿಂಗ್ ಸಿರೋಯಾ ತಮ್ಮ ನಿಧಿಗಳನ್ನು 100% ಬಳಸಿದ್ದಾರೆ. ರಾಜೀವ್ ಚಂದ್ರಶೇಖರ್ 59% ನಿಧಿ ಬಳಸಿಕೊಂಡಿದ್ದಾರೆ.
ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ಡಿ.ವಿ ಸದಾನಂದ ಗೌಡ 58% ನಿಧಿಗಳನ್ನು ಬಳಿಸಿಕೊಂಡಿದ್ದರೆ, ಬೀದರ್ ಸಂಸದ ಭಗವಂತ್ ಖೂಬಾ 79% ಬಳಕೆ ಮಾಡಿಕೊಂಡಿದ್ದಾರೆ.
ಜೆ.ಡಿ.ಎಸ್ ಹಿರಿಯ ರಾಜಕಾರಣಿ ಎಚ್.ಡಿ ದೇವೇಗೌಡ 64% ಬಳಕೆ ಮಾಡಿಕೊಂದಿದ್ದರೆ, ಕಾಂಗ್ರೆಸ್ ನ ಜೈರಾಮ್ ರಮೇಶ್ ಇನ್ನೂ ಖಾತೆಯನ್ನೇ ತೆರೆದಿಲ್ಲ.
ಸಂಸದರು ಎಂಪಿಎಲ್ಎಡಿ ನಿಧಿಯಡಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಜಿಲ್ಲಾ ಆಡಳಿತಗಳನ್ನು ಕೇಳಿಕೊಳ್ಳುತ್ತಾರೆ ಮತ್ತು ನಂತರ ಸಿದ್ಧಪಡಿಸಿದ ಪ್ರಸ್ತಾವನೆಗಳು ಕೆಲವು ತಾಂತ್ರಿಕ ಕಾರಣಗಳಿಂದ ಕೇಂದ್ರ ಸರ್ಕಾರದಿಂದ ತಿರಸ್ಕರಿಸಲ್ಪಡುತ್ತವೆ. ಆದ್ದರಿಂದ ಸಂಸದರು ಸರಿಯಾದ ಪ್ರಸ್ತಾವನೆಗಳ ಮೇಲೆ ನಿಗಾ ಇಡಬೇಕು ಮತ್ತು ಅವರ ಹಣವನ್ನು ಸರಿಯಾದ ರೀತಿಯಲ್ಲಿ ಬಳಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸುನಿಲ್ ಕುಲಕರ್ಣಿ ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದಾರೆ.