ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ತೆಗೆದುಹಾಕುವುದಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದಾರೆ. ಈ ಘೋಷಣೆಗೆ ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ಇದೀಗ ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಸಂಘದಿಂದ ವಿರೋಧ ವ್ಯಕ್ತವಾಗಿದೆ. ಸರಕಾರ ಈ ನೀತಿಯನ್ನು ಕೈಬಿಡುವ ಬದಲು ಬದಲಾವಣೆ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.
ಖಾಸಗಿ ಶಾಲೆಗಳ ಸಂಘದ ಪ್ರಕಾರ, ಇದು ವಿದ್ಯಾರ್ಥಿಗಳ ದೃಷ್ಠಿಯಿಂದ ‘ಆರೋಗ್ಯಕರ ಬೆಳವಣಿಗೆಯಲ್ಲ’ ಮತ್ತು ಸರ್ಕಾರವು ಈಗಾಗಲೇ ಜಾರಿಗೆ ಬಂದಿರುವಂತೆ ಎನ್‌ಇಪಿಯನ್ನು ಮುಂದುವರಿಸಬೇಕು ಮತ್ತು ನೀತಿಗೆ ಅಗತ್ಯವಿರುವಲ್ಲೆಲ್ಲಾ ಬದಲಾವಣೆಗಳನ್ನು ಮಾಡಬೇಕು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಬೆಳವಣಿಗೆಗಳ ಕುರಿತು ಮಾತನಾಡಿದ ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್, ವಿದ್ಯಾರ್ಥಿಗಳು ಮೂರು ವರ್ಷಗಳ ಪದವಿ ಪ್ರಮಾಣಪತ್ರವನ್ನು ಪಡೆಯುತ್ತಾರೆ ಮತ್ತು ರಾಜ್ಯವು ಎನ್‌ಇಪಿಯನ್ನು ರದ್ದುಗೊಳಿಸಲು ನಿರ್ಧರಿಸಿರುವುದರಿಂದ ನಾಲ್ಕನೇ ವರ್ಷಕ್ಕೆ ಬಡ್ತಿ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಆಗಸ್ಟ್ 21 ರಂದು ಉಪಕುಲಪತಿಗಳು ಮತ್ತು ತಜ್ಞರೊಂದಿಗೆ ಸಭೆ ನಡೆಸಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಜಾರಿಗೆ ತರಲಾಗುವ ಕರ್ನಾಟಕ ಶಿಕ್ಷಣ ನೀತಿಯನ್ನು ರಚಿಸಲು ಶೀಘ್ರದಲ್ಲೇ ಸಮಿತಿಯನ್ನು ರಚಿಸಲಾಗುವುದು ಎಂದು ಘೋಷಿಸಿದ್ದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ, ಅಶ್ವಥ್ ನಾರಾಯಣ ಸೇರಿದಂತೆ ಹಲವು ರಾಜ್ಯ ಬಿಜೆಪಿ ನಾಯಕರು ಎನ್‌ಇಪಿಯನ್ನು ರದ್ದುಗೊಳಿಸುವ ಸರ್ಕಾರದ ಕ್ರಮಗಳನ್ನು ಟೀಕಿಸಿದ್ದರು.