ಸಚಿವ ಉಮೇಶ ಕತ್ತಿ ಹೃದಯಾಘಾತದಿಂದ ನಿಧನ: ಪ್ರಧಾನಿಯಾದಿಯಾಗಿ ಗಣ್ಯರಿಂದ ಸಂತಾಪ

ಬೆಂಗಳೂರು: ಬಿಜೆಪಿ ನಾಯಕ, ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 61 ವರ್ಷದ ಕತ್ತಿ ಅವರನ್ನು ಬೆಂಗಳೂರಿನ ಡಾಲರ್‌ ಕಾಲೋನಿ ನಿವಾಸದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕತ್ತಿಯವರ ಪಾರ್ಥೀವ ಶರೀರವನ್ನು ಹುಕ್ಕೇರಿಯ ವಿಶ್ವರಾಜ್ ಶುಗರ್ಸ್ ಆವರಣದಲ್ಲಿ ಸಾರ್ವಜನಿಕರಿಗೆ ಗೌರವ ಸಲ್ಲಿಸಲು ಅನುಕೂಲವಾಗುವಂತೆ ಇಡಲಾಗುವುದು. ಹುಕ್ಕೇರಿಯ ಬೆಲ್ಲದಬಾಗೇವಾಡಿಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

ಸಚಿವರ ನಿಧನದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

ಬೆಳಗಾವಿಯ ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿಯಲ್ಲಿ ಜನಿಸಿದ ಉಮೇಶ್ ಕತ್ತಿ, 1985ರಲ್ಲಿ ತಮ್ಮ ತಂದೆ ವಿಶ್ವನಾಥ ಕತ್ತಿಯವರ ಹೆಜ್ಜೆ ಗುರುತಲ್ಲಿ ರಾಜಕೀಯ ಪ್ರವೇಶ ಮಾಡಿ, ಹುಕ್ಕೇರಿ ಕ್ಷೇತ್ರವನ್ನು ಪ್ರತಿನಿಧಿಸಿ ಎಂಟು ಬಾರಿ ಶಾಸಕರಾಗಿದ್ದರು.

ಕತ್ತಿ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, “ಶ್ರೀ ಉಮೇಶ ಕತ್ತಿ ಜೀ ಅವರು ಕರ್ನಾಟಕದ ಅಭಿವೃದ್ಧಿಗೆ ಉತ್ಕೃಷ್ಟ ಕೊಡುಗೆಗಳನ್ನು ನೀಡಿದ ಅನುಭವಿ ನಾಯಕರಾಗಿದ್ದರು. ಅವರ ನಿಧನದಿಂದ ನೋವಾಗಿದೆ. ಈ ದುರಂತದ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಬೆಂಬಲಿಗರೊಂದಿಗೆ ಇವೆ. ಓಂ ಶಾಂತಿ” ಎಂದು ಟ್ವೀಟಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿ, ಕ್ರಿಯಾಶೀಲ ನಾಯಕ ಮತ್ತು ಜನರ ಬದ್ಧತೆಯ ಸೇವಕರಾಗಿದ್ದ ಒಬ್ಬ ನುರಿತ ರಾಜಕಾರಣಿಯನ್ನು ರಾಜ್ಯ ಕಳೆದುಕೊಂಡಿದೆ ಎಂದ ಅವರು “ನನ್ನ ಆಪ್ತ ಸಹೋದ್ಯೋಗಿ” ಎಂದು ಬಣ್ಣಿಸಿದ್ದಾರೆ.

ಕತ್ತಿ ಅವರು ಪತ್ನಿ ಶೀಲಾ, ಪುತ್ರ ನಿಖಿಲ್ ಹಾಗೂ ಪುತ್ರಿ ಸ್ನೇಹಾ ಅವರನ್ನು ಅಗಲಿದ್ದಾರೆ.