ಕುಂದಾಪುರ: ಕೊರೋನಾ ವೈರಸ್ ರಾಜ್ಯದೆಲ್ಲಡೆ ವ್ಯಾಪಕವಾಗಿ ಹಬ್ಬುತ್ತಿರುವ ಬೆನ್ನಲ್ಲೇ ಸಿಎಂ ಯಡಿಯೂರಪ್ಪನವರು ಆದೇಶಿದ ರಾಜ್ಯಾದ್ಯಂತ ಲಾಕ್ಡೌನ್ಗೆ ಕುಂದಾಪುರ ಅಂಗಡಿ ಮಾಲೀಕರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ರಸ್ತೆಗಿಳಿಯದ ಬಸ್ಗಳು, ಆಟೋ ರಿಕ್ಷಾಗಳು:
ಅಗತ್ಯ ಬೇಕಾಗಿರುವ ಮೆಡಿಕಲ್, ತರಕಾರಿ, ಮಾಂಸ, ಮೀನು, ದಿನಸಿ ಸಾಮಾನುಗಳ ಅಂಗಡಿಗಳು ತೆರೆದಿದ್ದು ಬಹುತೇಕ ಎಲ್ಲರೂ ತಮ್ಮ ಅಂಗಡಿಗಳನ್ನು ತೆರೆಯದೆ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಬೆರಳೆಣಿಕೆಯ ಮಂದಿ ದಿನನಿತ್ಯದ ವಸ್ತುಗಳನ್ನು ಖರೀದಿಸಲು ನಗರಕ್ಕೆ ಆಗಮಿಸಿದ್ದಾರೆ. ಎಂದಿನಂತೆ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಸಾರಿಗೆ ಬಸ್ಗಳು ರಸ್ತೆಗೆ ಇಳಿಯದ ಹಿನ್ನೆಲೆಯಲ್ಲಿ ನಗರದಲ್ಲಿ ಜನಸಂಚಾರ ಸಾಕಷ್ಟು ವಿರಳವಾಗಿತ್ತು. ತುರ್ತು ಸೇವೆಗಳನ್ನು ಹೊರತುಪಡಿಸಿ ಬಹುತೇಕ ರಿಕ್ಷಾಗಳು ಕೂಡ ರಸ್ತೆಗಿಳಿಯದೆ ಕರೋನಾ ವಿರುದ್ದದ ಹೋರಾಟಕ್ಕೆ ಕೈಜೋಡಿಸಿದರು
ವಲಸೆ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಆಶ್ರಯ:
ನ್ಯಾಯಾಲಯ, ಮಿನಿವಿಧಾನಸೌಧ ಸರ್ಕಾರಿ ಕಚೇರಿಗಳೆಲ್ಲವೂ ಖಾಲಿಖಾಲಿಯಾಗಿದ್ದವು. ತಾಲೂಕಿನ ಎಲ್ಲಾ ಗ್ರಾಮೀಣ ಭಾಗಗಳಲ್ಲೂ ಸಂಪೂರ್ಣ ಬಂದ್ ಆಗಿದ್ದವು. ಶಾಸ್ತ್ರೀ ವೃತ್ತದಲ್ಲಿ ಕಾರ್ಯಾಚರಿಸುತ್ತಿರುವ ಇಂದಿರಾ ಕ್ಯಾಂಟೀನ್ನಲ್ಲಿ ಬೆಳಿಗ್ಗೆ 200 ತಿಂಡಿಗಳು ಖಾಲಿಯಾದವು. ವಲಸೆ ಕಾರ್ಮಿಕರು ಸೇರಿದಂತೆ ಅನೇಕ ಮಂದಿ ಇಂದಿರಾ ಕ್ಯಾಂಟೀನ್ನಲ್ಲಿ ಬೆಳಗ್ಗಿನ ಉಪಹಾರಕ್ಕಾಗಿ ಜಮಾಯಿಸಿದರು.
ಶಾಸ್ತ್ರೀವೃತ್ತದ ತುಂಬೆಲ್ಲಾ ಬೆಂಗಳೂರಿನ ಟಿಟಿ ಬಸ್ಗಳು:
ರಾಜ್ಯದೆಲ್ಲಡೆ ಲಾಕ್ಡೌನ್ ಆದೇಶ ಜಾರಿಯಾದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಕಂಪೆನಿ ಹಾಗೂ ಹೊಟೇಲ್ಗಳಲ್ಲಿ ದುಡಿಯುತ್ತಿರುವ ಕುಂದಾಪುರಿಗರು ಸೋಮವಾರ ರಾತ್ರಿಯೇ ಟೆಂಪೋ ಟ್ರಾವೆಲ್ಲರ್, ಬಾಡಿಗೆ ಕಾರುಗಳನ್ನು ಮಾಡಿಕೊಂಡು ಕುಂದಾಫುರಕ್ಕೆ ಬಂದರು. ಮಂಗಳವಾರ ಬೆಳಿಗ್ಗೆ ಕುಂದಾಪುರ ಶಾಸ್ತ್ರೀ ವೃತ್ತಕ್ಕೆ ಬಂದ ಟಿಟಿ, ಮಿನಿ ಬಸ್ ಹಾಗೂ ಟೂರಿಸ್ಟ್ ಕಾರುಗಳು ಅಲ್ಲಿಂದ ಗ್ರಾಮೀಣ ಭಾಗಗಳಿಗೆ ಪ್ರಯಾಣ ಬೆಳೆಸಿದವು. ನಸುಕಿನ ಜಾವದಲ್ಲೇ ಕುಂದಾಪುರ ಹೃದಯಭಾಗ ಶಾಸ್ತ್ರೀ ವೃತ್ತದಲ್ಲಿ ಸಾಕಷ್ಟು ಮಿನಿಬಸ್ಗಳು ನಿಂತಿರುವ ದೃಶ್ಯ ಕಂಡುಬಂದಿತು.
ರಜಾ ಮಜಾ ಸವಿದವರಿಗೆ ಖಾಕಿ ಎಚ್ಚರಿಕೆ:
ಕೋಟೇಶ್ವರ, ಖಾರ್ವಿಕೇರಿ, ಕೋಡಿ ಬೀಚ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ರಜಾ ಮಜಾವನ್ನು ಸವಿಯಲು ಮುಂದಾದ ಸಾರ್ವಜನಿಕರನ್ನು ಕುಂದಾಪುರ ನಗರ ಠಾಣಾ ಪಿಎಸ್ಐ ಹರೀಶ್ ಆರ್ ನಾಯ್ಕ್ ನೇತೃತ್ವದ ಪೊಲೀಸರ ತಂಡ ಖಡಕ್ ಎಚ್ಚರಿಕೆ ನೀಡಿ ಎಲ್ಲರನ್ನೂ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಯಿತು. ಕೆಲ ಕಡೆಗಳಲ್ಲಿ ಪೊಲೀಸರ ಮಾತಿಗೆ ವಾಗ್ವಾದಕ್ಕಿಳಿದ ಜನರಿಗೆ ಲಾಠಿ ಬೀಸುವ ಮೂಲಕ ಎಚ್ಚರಿಕೆಯನ್ನೂ ಕೊಡಲಾಯಿತು.
ತರಕಾರಿ, ಮೆಡಿಕಲ್ಗಳಲ್ಲಿ ಜನಜಂಗುಳಿ:
ದಿನಬಳಕೆಯ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಿದ್ದರಿಂದಾಗಿ ಕುಂದಾಪುರ ನಗರದೊಳಗಿರುವ ಮೂರು ತರಕಾರಿ ಅಂಗಡಿಗಳಲ್ಲಿ ಜನರು ಅಧಿಕ ಸಂಖ್ಯೆಯಲ್ಲಿ ಕಂಡುಬಂದರು. ಅಲ್ಲದೇ ಜನೌಷಧಿ ಮಳಿಗೆಯಲ್ಲಿ ಔಷಧಿಗಳನ್ನು ಖರೀದಿಸಲು ಮುಗಿಬೀಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಗ್ರಾಮೀಣ ಭಾಗದಲ್ಲೂ ಬಂದ್:
ಕುಂದಾಪುರ ನಗರ ಮಾತ್ರವಲ್ಲದೇ ಗ್ರಾಮೀಣ ಭಾಗದಲ್ಲೂ ಕಫ್ರ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹಾಲು ದಿನಸಿ ಅಂಗಡಿಗಳು ಬೆಳಗ್ಗಿನ ವೇಳೆಯಲ್ಲಿ ತೆರೆದಿತ್ತು. ಆದರೆ ಮಧ್ಯಾಹ್ನದ ಬಳಿಕ ಮೆಡಿಕಲ್ ಬಿಟ್ಟು ಉಳಿದೆಲ್ಲಾ ಅಂಗಡಿಗಳು ಬಂದ್ ಆದವು. ರಿಕ್ಷಾಗಳು ಕೂಡ ರಸ್ತೆಗಿಳಿಯಲಿಲ್ಲ. ತಾಲೂಕಿನ ಹಲವು ಗ್ರಾಮೀಣ ಭಾಗಗಳು ಬಿಕೋ ಎನ್ನುತ್ತಿತ್ತು.