ಗಂಡ ಕಪ್ಪೆಂದು ಅವಮಾನಿಸಿ ಪ್ರತ್ಯೇಕವಾಗಿ ವಾಸಿಸಿ ಸುಳ್ಳು ಆರೋಪ ಹೊರಿಸಿದ ಪತ್ನಿ: ಕ್ರೌರ್ಯದ ಹಿನ್ನೆಲೆಯಲ್ಲಿ ವಿವಾಹ ವಿಸರ್ಜಿಸಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಪತಿಯ ಮೈ ಬಣ್ಣವನ್ನು ‘ಕಪ್ಪು’ ಎಂದು ಅವಮಾನಿಸಿ ಪತ್ನಿ ಅದೇ ಕಾರಣಕ್ಕೆ ಆತನಿಂದ ದೂರವಿರುವುದು ಮತ್ತು ವಿಷಯವನ್ನು ಮುಚ್ಚಿಡಲು ಅಕ್ರಮ ಸಂಬಂಧಗಳ ಸುಳ್ಳು ಆರೋಪಗಳನ್ನು ಪತಿಯ ಮೇಲೆ ಹೊರಿಸುವುದು ಕ್ರೌರ್ಯದ ಪರಿಧಿಯಲ್ಲಿ ಬರುವುದು ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ವಿಭಾಗೀಯ ಪೀಠವು ಅಂಗೀಕರಿಸಿತು ಮತ್ತು ವಿಚ್ಛೇದನದ ತೀರ್ಪು ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿತು.

“ಗಂಡ ಕಪ್ಪಾಗಿದ್ದಾನೆ ಎಂಬ ಕಾರಣಕ್ಕಾಗಿ ಹೆಂಡತಿಯು ಗಂಡನನ್ನು ಅವಮಾನಿಸುತ್ತಿದ್ದಳು ಮತ್ತು ಯಾವುದೇ ಕಾರಣಗಳನ್ನು ನೀಡದೆ ಪತಿಯಿಂದ ದೂರವಿದ್ದು ವಾಸಿಸುತ್ತಿದ್ದಳು. ಅಲ್ಲದೆ, ಈ ವಿಷಯವನ್ನು ಮುಚ್ಚಿಡಲು ತನ್ನ ಪತಿಗೆ ಅನೈತಿಕ ಸಂಬಂಧಗಳಿವೆ ಎಂದು ಸುಳ್ಳು ಆರೋಪ ಹೊರಿಸಿದ್ದಳು. ಈ ಎಲ್ಲಾ ತಥ್ಯಗಳು ಖಂಡಿತವಾಗಿಯೂ ಕ್ರೌರ್ಯವನ್ನು ರೂಪಿಸುತ್ತವೆ” ಎಂದು ಕೋರ್ಟ್ ಹೇಳಿದೆ.

2007 ರಲ್ಲಿ ವಿವಾಹವಾದ ದಂಪತಿಗೆ ಒಂದು ಹೆಣ್ಣು ಮಗುವಿದೆ. 2012ರಲ್ಲಿ ವಿಚ್ಛೇದನ ಕೋರಿ ಪತಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ‘ಕಪ್ಪು ಮೈಬಣ್ಣ’ ಎಂಬ ಕಾರಣಕ್ಕೆ ಪತ್ನಿ ತನ್ನನ್ನು ಅವಮಾನಿಸುತ್ತಿದ್ದಳು ಎಂದು ಪತಿ ಆರೋಪಿಸಿದ್ದಾರೆ. 2011 ರಲ್ಲಿ, ಪತ್ನಿ 498a ಸೆಕ್ಷನ್ ಅಡಿಯಲ್ಲಿ ಪತಿ ಮತ್ತು ಆತನ ಕುಟುಂಬದ ವಿರುದ್ಧ “ಸುಳ್ಳು” ದೂರು ದಾಖಲಿಸಿದ್ದಳು. ಇದಲ್ಲದೆ, ಆಕೆ ಪತಿಯನ್ನು ತೊರೆದು ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಳು.

ಅನ್ಯ ಮಹಿಳೆಯ ಜೊತೆಗೆ ಗಂಡನ ಅನೈತಿಕ ಸಂಬಂಧವನ್ನು ಸಾಬೀತು ಪಡಿಸುವ ಯಾವುದೇ ಸಾಕ್ಷ್ಯಗಳು ಇಲ್ಲದಿರುವುದನ್ನು ಕೋರ್ಟ್ ಗಮನಿಸಿದೆ. ಆದ್ದರಿಂದ ಈ ಆರೋಪ ನಿರಾಧಾರ ಮತ್ತು ಸುಳ್ಳು ಎಂದು ಕೋರ್ಟ್ ಹೇಳಿದೆ. ಮನವಿಯಲ್ಲಿ ಅಂತಹ ಆರೋಪವನ್ನು ಮಾಡಿದರೆ, ಅಂತಹ ಆರೋಪವನ್ನು ಮಾಡಿದ ವ್ಯಕ್ತಿಯು ಅಗಾಧವಾದ ಮಾನಸಿಕ ಕ್ರೌರ್ಯಕ್ಕೆ ಒಳಗಾಗುತ್ತಾನೆ ಎಂದು ಖಚಿತವಾಗಿ ತೀರ್ಮಾನಿಸಬಹುದು ಎಂದು ಕೋರ್ಟ್ ಹೇಳಿದೆ.

ಪತಿಯ ಪಾತ್ರಕ್ಕೆ ಸಂಬಂಧಿಸಿದ ಆಧಾರರಹಿತ ಮತ್ತು ಅಜಾಗರೂಕ ಆರೋಪಗಳ ಪರಿಣಾಮವನ್ನು ಪರಿಗಣಿಸಲು ಕೌಟುಂಬಿಕ ನ್ಯಾಯಾಲಯ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.

“ಈ ಸಂಗತಿಯು ಹೆಂಡತಿಯು ಗಂಡನ ಸಹವಾಸವನ್ನು ಸೇರಲು ಇಷ್ಟಪಡುವುದಿಲ್ಲ ಮತ್ತು ಪತಿ ಮತ್ತು ಗಂಡನ ನಡುವೆ ದೊಡ್ಡ ಬಿರುಕು ಇದೆ ಎಂದು ಸ್ಪಷ್ಟವಾಗಿ ಸ್ಥಾಪಿಸುತ್ತದೆ. ಪ್ರಕರಣದ ಸತ್ಯಗಳು ಮತ್ತು ಸನ್ನಿವೇಶಗಳಲ್ಲಿ, ಹೆಂಡತಿಯು ಗಂಡನ ಮನೆ ಸೇರಿದರೂ ದೂರನ್ನು ಹಿಂಪಡೆಯಲು ಒಪ್ಪದಿರುವ ನಡವಳಿಕೆಯು ಹೆಂಡತಿಯು ಪತಿಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾಳೆ ಎಂಬ ಗಂಡನ ವಾದವನ್ನು ಸಮರ್ಥಿಸುತ್ತದೆ. ಅದರಂತೆ ಪತಿಯು ಆರೋಪಿಸಿರುವ ಕ್ರೌರ್ಯದ ಮನವಿಯನ್ನು ಸರಿಯಾಗಿ ಸ್ಥಾಪಿಸಲಾಗಿದೆ” ಎಂದಿರುವ ಹೈ ಕೋರ್ಟ್, ಈ ವಿವಾಹವನ್ನು ರದ್ದು ಮಾಡಿದೆ.