ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಪ್ರಕರಣ: ಅನುಮತಿ ನೀಡಿದ ಹೈ ಕೋರ್ಟ್

ಚಿತ್ರ: ಎ.ಎನ್.ಐ

ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಹಿಂದೂ ಸಂಘಟನೆಗಳು ಮುಂದಾಗಿದ್ದು, ಇದಕ್ಕೆ ಅನುಮತಿ ನೀಡದಂತೆ ಅಂಜುಮನ್ ಎ ಇಸ್ಲಾಂ ಕಡೆಯಿಂದ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಾಗಿದ್ದವು. ಈ ಪೈಕಿ ಕರ್ನಾಟಕದ ಹೈಕೋರ್ಟ್ ಅಂಜುಮನ್ ಎ ಇಸ್ಲಾಂ ಅರ್ಜಿಯನ್ನು ತಡರಾತ್ರಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಸಿದ್ಧತೆ ಆರಂಭವಾಗಿದೆ ಎಂದು ಝೀ ನ್ಯೂಸ್ ವರದಿ ಮಾಡಿದೆ.

ಕೇಂದ್ರ ಸರ್ಕಾರದ ಸಚಿವ ಪ್ರಹ್ಲಾದ್ ಜೋಶಿ ಸ್ಥಳದಲ್ಲಿದ್ದು, ಹೈಕೋರ್ಟ್ ತೀರ್ಪಿಗೆ ಹರ್ಷ ವ್ಯಕ್ತ ಪಡಿಸಿ, ಯಾವುದೇ ರೀತಿಯ ಕಾನೂನು ಉಲ್ಲಂಘನೆ ಆಗಬಾರದು. ಶಾಂತಿ ಸೌಹಾರ್ದತೆಯಿಂದ ಮೂರು ದಿನಗಳ ಕಾಲ ಗಣೇಶೋತ್ಸವ ಆಚರಿಸಬೇಕು ಎಂದು ಹೇಳಿದ್ದಾರೆ.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೋಶೋತ್ಸವಕ್ಕೆ ಅನುಮತಿ ನೀಡಬೇಕು ಎಂದು ವಾದಿಸಿದ ವಕೀಲ ಎ.ಜಿ ಧ್ಯಾನ್ ಚಿನ್ನಪ್ಪಾ , ಹುಬ್ಬಳ್ಳಿ ಮತ್ತು ಬೆಂಗಳೂರು ಪ್ರಕರಣಗಳಲ್ಲಿ ವ್ಯತ್ಯಾಸವಿದ್ದು, ಹುಬ್ಬಳ್ಳಿಯ ಜಮೀನು ಪುರಸಭೆಯ ವ್ಯಾಪ್ತಿಯಲ್ಲಿದೆ ಎಂದು ನ್ಯಾಯಾಲಯಕ್ಕೆ ಮನದಟ್ಟು ಮಾಡಿಸಿದರು. ಅಂಜುಮನ್ ಎ ಇಸ್ಲಾಂ ಬಳಿ ಇದು ಪೂಜಾ ಸ್ಥಳವೆಂದು ಪ್ರತಿಪಾದಿಸುವ ಯಾವ ದಾಖಲೆಗಳೂ ಇರಲಿಲ್ಲವಾದ್ದರಿಂದ ಗಣೋಶೋತ್ಸವವನ್ನು ಆಚರಿಸಲು ಹೈಕೋರ್ಟ್ ಅನುಮತಿ ನೀಡಿದೆ. ಆದಾಗ್ಯೂ, ಹಬ್ಬದ ಆಚರಣೆ ಕೇವಲ ಮೂರು ದಿನಗಳಿಗಷ್ಟೇ ಸೀಮಿತವಾಗಿದೆ.