ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಕಿರುತೆರೆ ನಟಿ ಅಭಿನಯಾಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಬೆಂಗಳೂರು: ಕನ್ನಡ ಹಿರಿತೆರೆ ಮತ್ತು ಕಿರುತೆರೆಯ ಹಿರಿಯ ನಟಿ ಅಭಿನಯಾ ಅವರಿಗೆ ಕರ್ನಾಟಕ ಉಚ್ಛ ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಹೋದರನ ಹೆಂಡತಿಗೆ ವರದಕ್ಷಿಣಿ ಕಿರುಕುಳ ನೀಡಿದ್ದಕ್ಕಾಗಿ ಹಾಗೂ ಕೌಟುಂಬಿಕ ದೌರ್ಜನ್ಯ ನಡೆಸಿದ್ದಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ. ಅಭಿನಯಾ ಅವರ ತಾಯಿ ಜಯಮ್ಮನಿಗೂ 5 ವರ್ಷ ಜೈಲು ಶಿಕ್ಷೆ ನೀಡಿ, ನ್ಯಾಯಾಲಯದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

ಅಭಿನಯಾ ಅವರ ಅಣ್ಣನ ಪತ್ನಿ ಲಕ್ಷ್ಮಿದೇವಿ ವರದಕ್ಷಿಣೆ ಕಿರುಕುಳ ವಿರುದ್ದ ದೂರು ನೀಡಿದ್ದರು. ಬೆಂಗಳೂರಿನ ಚಂದ್ರಾ ಲೇಔಟ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ವರದಕ್ಷಿಣೆ ಕಿರುಕುಳ ಆರೋಪದ ಅಡಿಯಲ್ಲಿ ಜಯಮ್ಮನಿಗೆ 5 ವರ್ಷ ಹಾಗೂ ಅಭಿನಯಾ ಸಹೋದರನಿಗೂ 2 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

1998ರಲ್ಲಿ ಅಭಿನಯಾ ಸಹೋದರನ ಜೊತೆ ಲಕ್ಷ್ಮಿದೇವಿ ವಿವಾಹ ನೆರವೇರಿತ್ತು. ಮದುವೆ ಬಳಿಕ ಗಂಡನ​ ಕುಟುಂಬದವರು ವರದಕ್ಷಿಣಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಂದ್ರಾ ಲೇಔಟ್​ ಠಾಣೆಯಲ್ಲಿ 2002 ರಲ್ಲಿ ಲಕ್ಷ್ಮಿ ದೂರು ದಾಖಲಿಸಿದ್ದರು. ಹೆರಿಗೆ ಬಳಿಕ ಪತಿಯ ಮನೆಯವರು ತನ್ನನ್ನು ಮನೆಗೆ ಸೇರಿಸಿಕೊಳ್ಳಲಿಲ್ಲ ಮತ್ತು ಪೋಷಕರ ಮನೆಯಲ್ಲಿ ಉಳಿದುಕೊಳ್ಳುವಂತೆ ಒತ್ತಡ ಹೇರಿದ್ದರು. ಕೊಲೆ ಬೆದರಿಕೆಯನ್ನೂ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು ಎನ್ನಲಾಗಿದೆ.

ಇದೀಗ ನ್ಯಾಯಾಲಯದಿಂದ ತೀರ್ಪು ಬಂದಿದ್ದು ಅಭಿನಯಾ, ಅವರ ತಾಯಿ ಮತ್ತು ಸಹೋದರನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.