ಮತಾಂತರ ವಿರೋಧಿ ಕಾನೂನು ತಿದ್ದುಪಡಿಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರವು ಮತಾಂತರ ವಿರೋಧಿ ಕಾನೂನಿಗೆ ಜಾರಿಗೆ ತಂದ ತಿದ್ದುಪಡಿಗಳನ್ನು ರದ್ದುಗೊಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಗುರುವಾರ ಹೇಳಿದ್ದಾರೆ.

ಪಾಟೀಲ್ ಪ್ರಕಾರ, ಜುಲೈ 5 ರಿಂದ ಪ್ರಾರಂಭವಾಗುವ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ “ಮತಾಂತರ ವಿರೋಧಿ ಮಸೂದೆಗೆ ಮಾಡಲಾದ ಬದಲಾವಣೆಗಳನ್ನು ರದ್ದುಗೊಳಿಸಲಾಗುವುದು”.

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮಸೂದೆ, 2021, ಪ್ರಕಾರ ತಪ್ಪು ನಿರೂಪಣೆ, ಬಲವಂತ, ವಂಚನೆ, ಆಮಿಷ ಅಥವಾ ಮದುವೆಯ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರವನ್ನು ನಿಷೇಧಿಸುತ್ತದೆ. ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 25,000 ರೂ. ವಿಧಿಸಬಹುದು. ಅಪ್ರಾಪ್ತ ವಯಸ್ಕರು, ಮಹಿಳೆಯರು ಅಥವಾ ಎಸ್‌ಸಿ/ಎಸ್‌ಟಿ ಸಮುದಾಯದ ಸದಸ್ಯರು ಅಕ್ರಮವಾಗಿ ಮತಾಂತರಗೊಳಿಸಲ್ಪಟ್ಟರೆ ಅಪರಾಧಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಮಸೂದೆಯನ್ನು ಸೆಪ್ಟೆಂಬರ್, 2022 ರಲ್ಲಿ ಅಂಗೀಕರಿಸಲಾಯಿತು.

ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಇದನ್ನು ಸಂವಿಧಾನ ವಿರೋಧಿ ಮತ್ತು ಅಲ್ಪಸಂಖ್ಯಾತರ ವಿರೋಧಿ ಎಂದು ಬಣ್ಣಿಸಿತ್ತು. ಮಸೂದೆ ವಿರುದ್ದ ಕ್ರೈಸ್ತ ಗುಂಪುಗಳೂ ಪ್ರತಿಭಟನೆ ನಡೆಸಿದ್ದವು.

ಏತನ್ಮಧ್ಯೆ, ಬಿಜೆಪಿ ಸರ್ಕಾರವು ಶಾಲಾ ಪಠ್ಯಪುಸ್ತಕಗಳಿಗೆ ಮಾಡಿದ ಪರಿಷ್ಕರಣೆಗಳನ್ನು ರದ್ದುಗೊಳಿಸುವುದಕ್ಕೆ ಸಂಪುಟ ಅನುಮೋದನೆ ನೀಡಿದೆ. ಇದರಲ್ಲಿ ಆರೆಸ್ಸೆಸ್ ಸಂಸ್ಥಾಪಕ ಕೆ ಬಿ ಹೆಡ್ಗೆವಾರ್ ಮತ್ತು ಸ್ವಾತಂತ್ರ್ಯ ಸೇನಾನಿ ವಿ ಡಿ ಸಾವರ್ಕರ್ ಅವರಿಗೆ ಸಂಬಂಧಿಸಿದ ಮತ್ತು ಚಕ್ರವರ್ತಿ ಸೂಲಿಬೆಲೆ ಬರೆದ ಪಾಠಗಳನ್ನು ತೆಗೆದುಹಾಕಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದ ಸರಣಿ ಘೋಷಣೆಗಳು ವಿಧಾನಸಭಾ ಚುನಾವಣೆಯ ವೇಳೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಿಗೆ ಅನುಗುಣವಾಗಿವೆ.