ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಎನ್.ಐ.ಎ ತೆಕ್ಕೆಗೆ; ಘಟನೆಯಿಂದ ಪಾಠ ಕಲಿಯಿರಿ ಎಂದ ಆಲೋಕ್ ಕುಮಾರ್

ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಹಸ್ತಾಂತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ತನಿಖೆ ನಡೆಸಲು ತನಿಖಾ ಸಂಸ್ಥೆಗೆ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕಂಕನಾಡಿ ಪೊಲೀಸ್ ಠಾಣೆಯಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳು ಮತ್ತು ಇತರ ಮಾಹಿತಿಗಳ ಆಧಾರದ ಮೇಲೆ ರಾಜ್ಯ ಸರ್ಕಾರವು ಈ ನಿರ್ಧಾರ ಕೈಗೊಂಡು ಯುಎಪಿಎ ಕಾಯ್ದೆಯಡಿ ತನಿಖೆ ನಡೆಸಲು ಶಿಫಾರಸು ಮಾಡಿದೆ ಎಂದಿದ್ದಾರೆ.

24 ವರ್ಷದ ಮೊಹಮ್ಮದ್ ಶಾರಿಕ್ ಮಂಗಳೂರು ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ. ಮಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸುವುದು ಶಾರಿಕ್‌ನ ಏಕೈಕ ಗುರಿಯಾಗಿತ್ತು. ನವೆಂಬರ್ 10 ರಂದು ಶಾರಿಕ್ ಮಂಗಳೂರು ಸುತ್ತಿ ಎಲ್ಲವನ್ನೂ ಸೂಕ್ಷ್ಮವಾಗಿ ಯೋಜಿಸಿದ್ದ ಮತ್ತು ಬಾಂಬ್ ಅನ್ನು ಎಲ್ಲಿಡಬೇಕು ಮತ್ತು ಅದು ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಕಂಡುಕೊಂಡಿದ್ದ.

Image
ಚಿತ್ರ: ಎಡಿಜಿಪಿ ಆಲೋಕ್ ಕುಮಾರ್/ಟ್ವಿಟರ್

ಅದರಂತೆ, ನವೆಂಬರ್ 19ರಂದು ಮಂಗಳೂರಿಗೆ ಭೇಟಿ ನೀಡಿದ್ದ. ನಾಗೋರಿಯತ್ತ ಹೋಗುತ್ತಿದ್ದ ಶಾರೀಕ್ ಅಲ್ಲೇ ಸಿಕ್ಕಿದ ಪುರುಷೋತ್ತಮ ಪೂಜಾರಿಯವರ ಆಟೋವನ್ನು ಹತ್ತಿ ಪಂಪ್‌ವೆಲ್‌ ಬಳಿ ಇಳಿಸುವಂತೆ ಕೇಳಿಕೊಂಡಿದ್ದಾನೆ. ಸಂಜೆ 4:20ರ ಸುಮಾರಿಗೆ ಆಟೋ ನಾಗೋರಿ ಬಳಿ ತಲುಪುತ್ತಿದ್ದಂತೆ ಶಾರೀಕ್ ಕೈಯಲ್ಲಿದ್ದ ಕುಕ್ಕರ್ ಬಾಂಬ್ ಸ್ಫೋಟಗೊಂಡಿದ್ದು, ಆಟೋ ಚಾಲಕ ಮತ್ತು ಶಾರಿಕ್ ಗಾಯಗೊಂಡಿದ್ದರು. ಶಾರೀಕ್ ಆಸ್ಪತ್ರೆಯಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವರದಿಯಾಗಿದೆ.

Image
ಚಿತ್ರ: ಎಡಿಜಿಪಿ ಆಲೋಕ್ ಕುಮಾರ್/ಟ್ವಿಟರ್

ಈ ಮಧ್ಯೆ ಎಡಿಜಿಪಿ ಆಲೋಕ್ ಕುಮಾರ್ ಮಂಗಳೂರು ಸ್ಫೋಟ ಪ್ರಕರಣದಿಂದ ಜನರು ಕಲಿಯಬೇಕಾದ ಪಾಠಗಳ ಬಗ್ಗೆ ಹೇಳಿದ್ದಾರೆ.

# ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಕಳೆದುಕೊಂಡರೆ ಜಾಗರೂಕರಾಗಿರಿ.
# ಯುಐಡಿಎಐ ಸೈಟ್‌ನ ದುರುಪಯೋಗವನ್ನು ತಡೆಯಲು ಲಭ್ಯವಿರುವ ಲಾಕ್ ಮತ್ತು ಅನ್‌ಲಾಕ್ ಸೌಲಭ್ಯವನ್ನು ಬಳಸಿ.
# ದಯವಿಟ್ಟು ಬಾಡಿಗೆದಾರರಿಗೆ ಮನೆ ಬಾಡಿಗೆಗೆ ನೀಡುವ ಮೊದಲು ಅವರ ಪೂರ್ವಾಪರಗಳನ್ನು ಪರಿಶೀಲಿಸಿ.
# ಮನೆಯ ಸುತ್ತ ಪರಿಣಾಮಕಾರಿ ನೆರೆಹೊರೆ ವೀಕ್ಷಣೆ ವ್ಯವಸ್ಥೆ ಜಾರಿಯಲ್ಲಿರಲಿ ಎಂದು ಅವರು ಕಿವಿಮಾತು ಹೇಳಿದ್ದಾರೆ