ಬೆಂಗಳೂರು: ರಾಜ್ಯದೆಲ್ಲೆಡೆ ಶಾಲೆಗಳ ಪುನರಾರಂಭದ ದಿನದಂದು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಿಹಿ ಖಾದ್ಯ ನೀಡಿ ಸ್ವಾಗತಿಸಲಾಗುವುದು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಶಾಲೆಯ ಮೊದಲ ದಿನದ ಮಧ್ಯಾಹ್ನದ ಊಟದ ಜೊತೆಗೆ ಕನಿಷ್ಠ ಒಂದು ಸಿಹಿ ಖಾದ್ಯವನ್ನು ತಯಾರಿಸುವಂತೆ ಶಾಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸುತ್ತೋಲೆಯ ಪ್ರಕಾರ, ಕ್ಷೀರ ಭಾಗ್ಯ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಗಳು ಶಾಲಾ ಪುನರಾರಂಭದ ಮೊದಲ ದಿನದಿಂದಲೆ ಕಾರ್ಯನಿರ್ವಹಿಸಲಿವೆ. ಸಿಹಿ ಖಾದ್ಯದ ಜತೆಗೆ ಶಾಲೆಗಳನ್ನು ಅಲಂಕರಿಸಿ ಹಬ್ಬದ ವಾತಾವರಣ ಮೂಡಿಸುವಂತೆ ಶಾಲೆಗಳಿಗೆ ಸೂಚಿಸಲಾಗಿದೆ. ಈ ಬಾರಿ 15 ದಿನಗಳ ಮೊದಲೆ ಶಾಲೆಗಳು ಪುನರಾರಂಭವಾಗುತ್ತಿದ್ದು, ಬಹುತೇಕ ಶಾಲೆಗಳು ಸ್ವಚ್ಚತೆ ಮತ್ತು ನೈರ್ಮಲ್ಯೀಕರಣವನ್ನು ಕೈಗೊಂಡು ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಜ್ಜಾಗಿವೆ.
ಒಂದೆಡೆ ಖಾಸಗಿ ಶಾಲೆಗಳು ದುಬಾರಿ ಶುಲ್ಕಗಳ ಮೂಲಕ ಶಾಲಾ ಮಕ್ಕಳನ್ನು ಸ್ವಾಗತಿಸುತ್ತಿದ್ದರೆ, ಇನ್ನೊಂದೆಡೆ ಸರ್ಕಾರಿ ಶಾಲೆಗಳು ಸಿಹಿ ಖಾದ್ಯ ನೀಡುವ ಮೂಲಕ ಮಕ್ಕಳನ್ನು ಎದುರುಗೊಳ್ಳಲು ತಯಾರಾಗಿ ನಿಂತಿದೆ.